ADVERTISEMENT

ಮಿಶ್ರಾ ಜಾಮೀನು ಪ್ರಶ್ನಿಸಿ ಮೇಲ್ಮನವಿ ಪರಿಶೀಲನೆ: ಉತ್ತರ ಪ್ರದೇಶ ಸರ್ಕಾರ ಹೇಳಿಕೆ

ಸುಪ್ರೀಂ ಕೋರ್ಟ್‌ನಲ್ಲಿ ಉತ್ತರ ಪ್ರದೇಶ ಸರ್ಕಾರ ಹೇಳಿಕೆ

ಪಿಟಿಐ
Published 29 ಮಾರ್ಚ್ 2022, 19:00 IST
Last Updated 29 ಮಾರ್ಚ್ 2022, 19:00 IST
   

ನವದೆಹಲಿ: ಲಖಿಂಪುರ–ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಆಶಿಶ್ ಮಿಶ್ರಾಗೆ ಜಾಮೀನು ನೀಡಿದ್ದ ಅಲಹಾಬಾದ್ ಹೈಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ವಿಚಾರವು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಮಾಹಿತಿ ನೀಡಿದೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮಧ್ಯೆಯೇ ಆಶಿಶ್ ಮಿಶ್ರಾಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು ನೀಡಿತ್ತು. ಲಖಿಂಪುರ–ಖೇರಿ ಹತ್ಯೆ ಪ್ರಕರಣದ ಸಂತ್ರಸ್ತ ಕುಟುಂಬಗಳ ಸದಸ್ಯರು ಹೈಕೋರ್ಟ್‌ನ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಆಶಿಶ್‌ಗೆ ಜಾಮೀನು ನೀಡುವುದನ್ನು ಉತ್ತರ ಪ್ರದೇಶ ಸರ್ಕಾರ ವಿರೋಧಿಸಲಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದರು.

ಈ ಆರೋಪವನ್ನು ಉತ್ತರ ಪ್ರದೇಶ ಸರ್ಕಾರವು ನಿರಾಕರಿಸಿದೆ.‘ಆರೋಪಿ ಮಿಶ್ರಾಗೆ ಜಾಮೀನು ನೀಡುವುದನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ವಿರೋಧಿಸಿದೆ. ತೀರ್ಪು ಪ್ರಶ್ನಿಸುವ ವಿಚಾರವನ್ನು ಸಂಬಂಧಪಟ್ಟ ಪ್ರಾಧಿಕಾರಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ’ ಎಂದು ಕೋರ್ಟ್‌ಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ ತಿಳಿಸಿದೆ.

ADVERTISEMENT

ಪ್ರಮುಖ ಸಾಕ್ಷಿದಾರರೊಬ್ಬರ ಮೇಲೆ ಹಲ್ಲೆ ನಡೆದಿದೆ.ಆಶಿಶ್‌ಗೆ ಜಾಮೀನು ದೊರೆತ ಕಾರಣದಿಂದಲೇ ಹಲ್ಲೆ ನಡೆಸಲು ಸಾಧ್ಯವಾಗಿದೆ ಎಂದೂ ಅರ್ಜಿದಾರರು ಆರೋಪಿಸಿದ್ದರು. ಇದನ್ನೂ ಉತ್ತರ ಪ್ರದೇಶ ಸರ್ಕಾರ ನಿರಾಕರಿಸಿದೆ.

‘ರೈತ ಜರ್ನೈಲ್ ಸಿಂಗ್ ಅವರ ಮಗ ದಿಲ್ಜೋತ್ ಸಿಂಗ್ ‌ಮೇಲೆ ಮಾರ್ಚ್ 10ರಂದು ಹಲ್ಲೆಯಾಗಿತ್ತು. ಇದರಲ್ಲಿ ಆರೋಪಿ ಆಶಿಶ್ ಮಿಶ್ರಾ ಪಾತ್ರವಿಲ್ಲ. ಬದಲಿಗೆ ಹೋಳಿ ಆಚರಣೆ ವೇಳೆ ಒಂದು ಗುಂಪಿನೊಂದಿಗೆ ಆದ ಕಲಹದಲ್ಲಿ ದಿಲ್ಜೋತ್ ಸಿಂಗ್ ಮೇಲೆ ಹಲ್ಲೆ ನಡೆ
ದಿದೆ.ಕೋರ್ಟ್ ಆದೇಶದನ್ವಯ ಲಖಿಂಪುರ– ಖೇರಿ ಪ್ರಕರಣದ ಎಲ್ಲ ಸಂತ್ರಸ್ತ ಕುಟುಂಬಗಳು ಹಾಗೂ ಸಾಕ್ಷಿ
ಗಳಿಗೆ ನಿರಂತರ ರಕ್ಷಣೆ ನೀಡಲಾಗುತ್ತಿದೆ’ ಎಂದು ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.