ADVERTISEMENT

Puri Jagannath Yatra | ವಿಜೃಂಭಣೆಯ ಜಗನ್ನಾಥ ರಥೋತ್ಸವ: ಲಕ್ಷಾಂತರ ಭಕ್ತರು ಭಾಗಿ

ಪಿಟಿಐ
Published 27 ಜೂನ್ 2025, 4:47 IST
Last Updated 27 ಜೂನ್ 2025, 4:47 IST
<div class="paragraphs"><p>ಪುರಿ ಜಗನ್ನಾಥ ರಥಯಾತ್ರೆ</p></div>

ಪುರಿ ಜಗನ್ನಾಥ ರಥಯಾತ್ರೆ

   

(ಪಿಟಿಐ ಚಿತ್ರ)

ಪುರಿ: ವಿಶ್ವವಿಖ್ಯಾತ ಪುರಿಯಲ್ಲಿ ಐತಿಹಾಸಿಕ ಜಗನ್ನಾಥ ಸ್ವಾಮಿಯ ವಾರ್ಷಿಕ ರಥಯಾತ್ರೆ ಸಂಭ್ರಮ ಮನೆಮಾಡಿದೆ. ಈ ಧಾರ್ಮಿಕ ಉತ್ಸವದಲ್ಲಿ ಭಾಗಿಯಾಗಲು ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ರಥಯಾತ್ರೆ ಹಿನ್ನೆಲೆ ಒಡಿಶಾ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಗುರುವಾರ ಸಂಜೆಯ ವೇಳೆಗೆ ಸುಮಾರು ಒಂದು ಲಕ್ಷ ಜನರು ಪುರಿ ತಲುಪಿದ್ದಾರೆ. ಇಂದು(ಶುಕ್ರವಾರ) ಬೆಳಿಗ್ಗೆ ಅವರ ಸಂಖ್ಯೆ ದುಪ್ಪಟ್ಟು ಹೆಚ್ಚಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದೇಶದಾದ್ಯಂತ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

ಪುರಿ ಜಗನ್ನಾಥ ರಥಯಾತ್ರೆ

'ಭಗವಾನ್‌ ಜಗನ್ನಾಥನ ಕೃಪೆಯಿಂದ, ಇಂದು ಸುಗಮ ರಥಯಾತ್ರೆ ನಡೆಸಲು ನಾವು ಸಿದ್ಧರಾಗಿದ್ದೇವೆ. ನಮಗೆ ಸ್ವಯಂ ಸೇವಕರಿಂದ ಸಂಪೂರ್ಣ ಬೆಂಬಲ ಮತ್ತು ಸಹಕಾರ ಸಿಗುತ್ತಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ' ಎಂದು ಜಗನ್ನಾಥ ದೇವಾಲಯ ಆಡಳಿತ ಮಂಡಳಿಯ (SJTA) ಮುಖ್ಯ ಆಡಳಿತಾಧಿಕಾರಿ ಹೇಳಿದ್ದಾರೆ.

ಭದ್ರತೆಗಾಗಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 8 ತುಕಡಿ ಸೇರಿದಂತೆ ಸುಮಾರು 10,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಣ್ಗಾವಲಿಗಾಗಿ ಪಟ್ಟಣದ ವಿವಿಧೆಡೆ 250ಕ್ಕೂ ಹೆಚ್ಚು ಕೃತಕ ಬುದ್ಧಿಮತ್ತೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಉತ್ಸವವನ್ನು ಮೇಲ್ವಿಚಾರಣೆ ಮಾಡಲು ಇದೇ ಮೊದಲ ಬಾರಿಗೆ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ತೆರೆಯಲಾಗಿದೆ ಎಂದು ಒಡಿಶಾ ಡಿಜಿಪಿ ವೈ.ಬಿ. ಖುರಾನಿಯಾ ಹೇಳಿದ್ದಾರೆ.

ಶುಭಾಶಯ ಕೋರಿದ ಪ್ರಧಾನಿ, ರಾಷ್ಟ್ರಪತಿ

ಜಗನ್ನಾಥನ ರಥಯಾತ್ರೆಯ ಈ ಪವಿತ್ರ ಸಂದರ್ಭದಲ್ಲಿ ಎಲ್ಲಾ ದೇಶವಾಸಿಗಳಿಗೆ ನನ್ನ ಶುಭಾಶಯಗಳು. ನಂಬಿಕೆ ಮತ್ತು ಭಕ್ತಿಯ ಈ ಪವಿತ್ರ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ, ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ತರಲಿ ಎಂದು ನಾನು ಬಯಸುತ್ತೇನೆ
ನರೇಂದ್ರ ಮೋದಿ, ಪ್ರಧಾನ ಮಂತ್ರಿ
ಪವಿತ್ರ ರಥಯಾತ್ರೆಯ ಸಂದರ್ಭದಲ್ಲಿ, ಭಾರತ ಮತ್ತು ವಿದೇಶಗಳಲ್ಲಿರುವ ಜಗನ್ನಾಥನ ಭಕ್ತರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ಪ್ರಪಂಚದಾದ್ಯಂತ ಶಾಂತಿ, ಸ್ನೇಹ ಮತ್ತು ಸಾಮರಸ್ಯ ನೆಲೆಸಲಿ ಎಂಬುವುದು ಭಗವಂತ ಜಗನ್ನಾಥನಲ್ಲಿ ನನ್ನ ಪ್ರಾರ್ಥನೆ
ದ್ರೌಪದಿ ಮುರ್ಮು, ರಾಷ್ಟ್ರಪತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.