ADVERTISEMENT

ಲಾಲುಗೆ ಮೂತ್ರಪಿಂಡ ದಾನ ಮಾಡಲಿರುವ ಸಿಂಗಪುರದಲ್ಲಿರುವ ಮಗಳು ರೋಶಿನಿ

ಪಿಟಿಐ
Published 10 ನವೆಂಬರ್ 2022, 10:28 IST
Last Updated 10 ನವೆಂಬರ್ 2022, 10:28 IST
   

ನವದೆಹಲಿ: ಅನಾರೋಗ್ಯಕ್ಕೆ ಒಳಗಾಗಿರುವ ರಾಷ್ಟ್ರೀಯ ಜನತಾ ದಳದ(ಆರ್‌ಜೆಡಿ) ವರಿಷ್ಠ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಂಗಪುರದಲ್ಲಿರುವ ಮಗಳು ರೋಶಿನಿ ಯಾದವ್ ಕಿಡ್ನಿ ದಾನ ಮಾಡಲಿದ್ದಾರೆ ಎಂದು ಅವರ ಕುಟುಂಬದ ಆಪ್ತರು ತಿಳಿಸಿದ್ದಾರೆ.

ಸಿಂಗಪುರದಲ್ಲಿ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದ 74 ವರ್ಷದ ಲಾಲು, ಕಳೆದ ತಿಂಗಳು ಸ್ವದೇಶಕ್ಕೆ ವಾಪಸ್ ಆಗಿದ್ದರು.

ಆರೋಗ್ಯದ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಆರ್‌ಜೆಡಿ ಅಧ್ಯಕ್ಷರಿಗೆ ಕಿಡ್ನಿ ಕಸಿ ಮಾಡಿಸಿಕೊಳ್ಳಲು ವೈದ್ಯರು ಸೂಚಿಸಿದ್ದಾರೆ.

ADVERTISEMENT

ಈ ಹಿನ್ನೆಲೆಯಲ್ಲಿ ಸಿಂಗಪುರದಲ್ಲಿರುವ ಅವರ ಮಗಳು ರೋಶಿನಿ ಯಾದವ್, ತಮ್ಮ ತಂದೆಗಾಗಿ ಮೂತ್ರಪಿಂಡ ನೀಡಲು ಮುಂದೆ ಬಂದಿದ್ದಾರೆ ಎಂದು ಕುಟುಂಬ ಸದಸ್ಯರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಮೇವು ಹಗರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಲಾಲು ಪ್ರಸಾದ್ ಯಾದವ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ. ಸದ್ಯ, ದೆಹಲಿಯಲ್ಲಿರುವ ಅವರು, ದೆಹಲಿ ಮತ್ತು ರಾಂಚಿ ಆಸ್ಪತ್ರೆಗಳಲ್ಲಿ ಈ ಹಿಂದೆ ಮೂತ್ರಪಿಂಡ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದರು.

ಆದರೆ, ಲಾಲು ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಎಲ್ಲಿ ಮತ್ತು ಯಾವಾಗ ನಡೆಯಲಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಲಾಲು ಅವರಿಗೆ ಈ ಹಿಂದೆ ಚಿಕಿತ್ಸೆ ನೀಡಿದ್ದ ಏಮ್ಸ್ ವೈದ್ಯರು ಸಹ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.