ADVERTISEMENT

ಉದ್ಯೋಗಕ್ಕಾಗಿ ಜಮೀನು ಹಗರಣ: ಬಿಹಾರದ ಡಿಸಿಎಂ ತೇಜಸ್ವಿ ಯಾದವ್‌ಗೆ ಸಮನ್ಸ್‌

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2023, 15:51 IST
Last Updated 23 ಡಿಸೆಂಬರ್ 2023, 15:51 IST
ತೇಜಸ್ವಿ ಯಾದವ್
ತೇಜಸ್ವಿ ಯಾದವ್   

ನವದೆಹಲಿ: ಉದ್ಯೋಗಕ್ಕಾಗಿ ಜಮೀನು ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ) ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ಶನಿವಾರ ಮತ್ತೆ ಸಮನ್ಸ್‌ ಜಾರಿಗೊಳಿಸಿದ್ದು, ಜ.5ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇ.ಡಿ ಈ ಹಿಂದೆ, ಡಿ.22ರಂದು ವಿಚಾರಣೆಗೆ ಹಾಜರಾಗಿ ಎಂದು ತೇಜಸ್ವಿಗೆ ಸಮನ್ಸ್‌ ಜಾರಿಗೊಳಿಸಿತ್ತು. ಯಾದವ್‌ ಗೈರಾಗಿದ್ದರಿಂದ, ಶನಿವಾರ ಹೊಸ ಸಮನ್ಸ್‌ ಜಾರಿಗೊಳಿಸಿದೆ ಎನ್ನಲಾಗಿದೆ.

ತೇಜಸ್ವಿ ತಂದೆ ಹಾಗೂ ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್‌ ಯುಪಿಎ–1 ಸರ್ಕಾರದ ಅವಧಿಯಲ್ಲಿ ಕೇಂದ್ರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿದ್ದಾಗ ನಡೆದಿರುವ ಹಗರಣ ಇದಾಗಿದ್ದು, ನವದೆಹಲಿಯಲ್ಲಿರುವ ಇ.ಡಿ ಮುಖ್ಯ ಕಚೇರಿಯಲ್ಲಿ ಡಿ.27ರಂದು ನಡೆಯುವ ವಿಚಾರಣೆಗೆ ಹಾಜರಾಗಿ ಎಂದು ಜಾರಿ ನಿರ್ದೇಶನಾಲಯ ಲಾಲು ಅವರಿಗೂ ಈಗಾಗಲೇ ಸಮನ್ಸ್‌ ನೀಡಿದೆ.

ADVERTISEMENT

2004ರಿಂದ 2009ರವರೆಗೆ ಲಾಲು ಪ್ರಸಾದ್‌ ರೈಲ್ವೆ ಸಚಿವರಾಗಿದ್ದರು. ಈ ಸಂದರ್ಭದಲ್ಲಿ ಅವರ ಕುಟುಂಬದ ಸದಸ್ಯರಿಗೆ ಮತ್ತು ಎ.ಕೆ. ಇನ್ಫೋಸಿಸ್ಟಮ್ಸ್‌ ಪ್ರೈವೇಟ್‌ ಲಿಮಿಟೆಡ್‌ ಎಂಬ ಹೆಸರಿನ ಕಂಪನಿಗೆ, ಭೂಮಿಯನ್ನು ವರ್ಗಾಯಿಸಿದ ನಂತರವೇ ಹಲವಾರು ಜನರಿಗೆ ರೈಲ್ವೆಯ ವಿವಿಧ ವಲಯಗಳಲ್ಲಿ ಗ್ರೂಪ್ ಡಿ ಉದ್ಯೋಗ ನೀಡಲಾಗಿದೆ ಎಂಬ ಆರೋಪವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.