ADVERTISEMENT

ದೇವಿಂದರ್ ಬಂಧನದ ಹಿಂದೆ ಪಿತೂರಿ: ಕಾಂಗ್ರೆಸ್ ಆರೋಪ

ಪುಲ್ವಾಮ ದಾಳಿಯನ್ನು ನಡೆಸಿದ್ದ ನಿಜವಾದ ದಾಳಿಕೋರರು ಯಾರು?

ಪಿಟಿಐ
Published 14 ಜನವರಿ 2020, 20:00 IST
Last Updated 14 ಜನವರಿ 2020, 20:00 IST

ನವದೆಹಲಿ : ‘ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಅವರ ಬಂಧನದ ಹಿಂದೆ ದೊಡ್ಡ ಪಿತೂರಿ ಇದೆ’ ಎಂದು ಮಂಗಳವಾರ ಕಾಂಗ್ರೆಸ್ ಆರೋಪಿಸಿದೆ.

ಈ ಸಂಬಂಧ ಸಮಗ್ರ ತನಿಖೆ ನಡೆಸಬೇಕೆಂದು ಪ್ರಧಾನಿ ನರೇಂದ್ರ ಮೋದಿಹಾಗೂ ಗೃಹಸಚಿವ ಅಮಿತ್ ಶಾ ಅವರಿಗೆ ಕಾಂಗ್ರೆಸ್ ಒತ್ತಾಯಿಸಿದೆ.

‘ದೇವಿಂದರ್ ಸಿಂಗ್ ಒಬ್ಬರೇ ಸ್ವತಂತ್ರವಾಗಿ ಇಂಥ ಕೆಲಸ ಮಾಡಲು ಅಸಾಧ್ಯ. ಇದನ್ನು ಗಮನಿಸಿದರೆ ಪುಲ್ವಾಮ ದಾಳಿಯ ಹಿಂದಿನ ನಿಜವಾದ ಅಪರಾಧಿಗಳು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ’ ಎಂದು ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.

ADVERTISEMENT

‘ಇದೆಲ್ಲದರ ಹಿಂದಿರುವ ಪಿತೂರಿಯನ್ನು ದೇಶ ತಿಳಿಯಲು ಬಯಸುತ್ತದೆ. ಪುಲ್ವಾಮ ದಾಳಿಯ ಸಂದರ್ಭದಲ್ಲಿ ಅಲ್ಲಿಗೆ ವರ್ಗಾವಣೆ ಮಾಡಿಸಿಕೊಂಡಿದ್ದ ಅಧಿಕಾರಿ ಬೇರಾರೂ ಅಲ್ಲ ಅವರು ದೇವಿಂದರ್ ಸಿಂಗ್ ಅವರೇ ಆಗಿದ್ದರು. ಪುಲ್ವಾಮ ದಾಳಿಯಲ್ಲಿ ಬಳಕೆಯಾದ ಆರ್‌ಡಿಎಕ್ಸ್ ಎಲ್ಲಿಂದ ಬಂತು? ಒಂದು ವೇಳೆ ದೇವಿಂದರ್ ಸಿಂಗ್ ಬದಲಿಗೆ ದೇವಿಂದರ್ ಖಾನ್ ಆಗಿದ್ದರೆ, ಇಷ್ಟೊಂದಿಗೆ ಆರ್‌ಎಸ್‌ಎಸ್ ಪಡೆಗಳಿಂದ ಟ್ರೋಲ್‌ಗಳ ಸುರಿಮಳೆಯೇ ಆಗುತ್ತಿತ್ತು. ನಮ್ಮ ದೇಶದ ಶತ್ರುಗಳನ್ನು ಅವರ ಬಣ್ಣ, ಧರ್ಮ ಮತ್ತು ಸಿದ್ಧಾಂತದ ಆಧಾರದ ಹೊರತಾಗಿ ಖಂಡಿಸಬೇಕು’ ಎಂದು ಚೌಧರಿ ಟ್ವಿಟರ್‌ನಲ್ಲಿ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಮುಖ್ಯ ವಕ್ತಾರ ರಂದೀಪ್ ಸುರ್ಜೆವಾಲಾ, ‘ಯಾರ ಸೂಚನೆ ಮೇರೆಗೆ ದೇವಿಂದರ್ ಸಿಂಗ್ ದೆಹಲಿಗೆ ಭಯೋತ್ಪಾದಕರನ್ನು ಕರೆದುಕೊಂಡು ಬಂದರು ಎಂಬುದರ ಹಿಂದೆ ದೊಡ್ಡ ಪಿತೂರಿಯೇ ಇದೆ. ಉನ್ನತ ಅಧಿಕಾರದಲ್ಲಿರುವವರು ಸಿಂಗ್ ಅವರೊಂದಿಗೆ ಷಾಮೀಲಾಗಿದ್ದಾರೆಯೇ ಅಥವಾ ಸಿಂಗ್ ಬರೀ ವಾಹಕರಾಗಿ ಬಳಕೆಯಾಗಿದ್ದಾರೆಯೇ ಎಂದಿರುವ ಅವರು, ಈ ಎಲ್ಲಾ ಪ್ರಶ್ನೆಗಳಿಗೆ ಪ್ರಧಾನಿ ಮತ್ತು ಗೃಹ ಸಚಿವರು ಉತ್ತರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ಜಮ್ಮು–ಕಾಶ್ಮೀರದ ಭಯೋತ್ಪಾದಕರು ಸೇರಿದಂತೆ ಇತರ ಭಯೋತ್ಪಾದಕಾ ಸಂಘಟನೆಗಳೊಂದಿಗೆ ಸಿಂಗ್ ಎಷ್ಟು ದಿನಗಳಿಂದ ಸಂಪರ್ಕ ಹೊಂದಿದ್ದರು. 2001ರಲ್ಲಿ ನಡೆದ ಸಂಸತ್ ಮೇಲಿನ ದಾಳಿಯಲ್ಲಿ ಸಿಂಗ್ ಪಾತ್ರವಿದೆಯೇ? ಪುಲ್ವಾಮ ದಾಳಿಗೂ ಮುನ್ನ ಅಲ್ಲಿಗೆ ಡಿವೈಎಸ್ಪಿಯಾಗಿ ಹೋದ ದೇವಿಂದರ್ ಸಿಂಗ್‌ಗೂ ಪುಲ್ವಾಮ ದಾಳಿಗೆ ಏನಾದರೂ ಸಂಬಂಧವಿದೆಯೇ?’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.