ADVERTISEMENT

ಸರ್ವರ ಹೃದಯವಾಸಿ ವಾಜಪೇಯಿ ಪಂಚಭೂತಗಳಲ್ಲಿ ಲೀನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2018, 11:51 IST
Last Updated 17 ಆಗಸ್ಟ್ 2018, 11:51 IST
   

ನವದೆಹಲಿ:ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶುಕ್ರವಾರ ಸಂಜೆ 4.55ಕ್ಕೆ ಯಮುನಾ ನದಿ ತೀರದಲ್ಲಿನ ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಅಜಾತಶತ್ರು ಎಂದೇ ಬಣ್ಣಿಸಲ್ಪಟ್ಟಿದ್ದ ವಾಜಪೇಯಿ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ವಿಧಿ ವಿಧಾನಗಳು ಬ್ರಾಹ್ಮಣ ಸಂಪ್ರದಾಯದಂತೆ ನೆರವೇರಿದವು.

ಕ್ರಿಯಾ ವಿಧಾನದಲ್ಲಿ ಶಾಂತಿ ಮಂತ್ರ ಘೋಷ ನಡೆಯಿತು. ಕುಟುಂಬಸ್ಥರು ಪಾರ್ಥೀವ ಶರೀವನ್ನು ಪ್ರದಕ್ಷಿಣೆ ಹಾಕಿ ನಮನ ಸಲ್ಲಿಸಿ, ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಪಾರ್ಥೀವ ಶರೀರವನ್ನು ಜೋಡಿಸಿಟ್ಟ ಕಟ್ಟಿಗೆಯ ಮೇಲಿರಿಸಿ, ಅಗ್ನಿ ಸ್ಪರ್ಶ ಮಾಡಲಾಯಿತು.

ADVERTISEMENT

ಬಿಜಪಿ ಕಚೇರಿಯಿಂದ ಸ್ಮೃತಿ ಸ್ಥಳದವರೆಗೆ ಮೆರವಣಿಗೆಯಲ್ಲಿ ಪಾರ್ಥಿವ ಶರೀರವನ್ನು ತರಲಾಯಿತು. ಭಾರತೀಯ ವಾಯುಪಡೆ, ಭೂ ಸೇನೆ, ನೌಕಾಪಡೆ ನಾಯಕರು ಸೇರಿದಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ಲೋಕಸಭೆ ಸಭಾಪತಿ ಸುಮಿತ್ರಾ ಮಹಾಜನ್‌, ಬಿಜೆಪಿ ಹಿರಿಯ ಮುಖಂಡ ಎಲ್‌.ಕೆ. ಅಡ್ವಾಣಿ ಅವರು ಅಂತಿಮ ನಮನ ಸಲ್ಲಿಸಿದರು.

ವಿದೇಶಿ ಗಣ್ಯರು ಸೇರಿದಂತೆ ರಾಷ್ಟ್ರದ ಸರ್ವ ಪಕ್ಷಗಳ ನಾಯಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಮೆರವಣಿಗೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದರು. ನಾಲ್ಕು ಕಿ.ಮೀ. ದೂರ ನಡೆದ ಮೆರವಣಿಗೆಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಅಭಿಮಾನಿಗಳು ನಿಂತು ತಮ್ಮ ನೆಚ್ಚಿನ ನಾಯಕನಿಗೆ ವಿದಾಯ ಹೇಳಿದರು.

ಮೆರವಣಿಗೆಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಗಣ್ಯರು ಪಾರ್ಥೀವ ಶರೀರವಿರಿಸಿದ್ದ ವಾಹನದ ಹಿಂದೆ ಕಾಲ್ನಡಿಗೆಯಲ್ಲಿಯೇ ಸ್ಮೃತಿ ಸ್ಥಳ ತಲುಪಿದರು.

ಅನಾರೋಗ್ಯ ನಿಮಿತ್ತ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಾಜಪೇಯಿ ಅವರು ಗುರುವಾರ ಸಂಜೆ 5.5ಕ್ಕೆ ಕೊನೆಯುಸಿರೆಳೆದಿದ್ದರು. ದೂರವಾದ ಮಹಾನ್‌ ರಾಷ್ಟ್ರ ನಾಯಕನಿಗೆ ಇಡೀ ದೇಶವೇ ಕಂಬನಿ ಮಿಡಿದಿದೆ.

ವಾಜಪೇಯಿ ಅವರ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು.
ವಾಜಪೇಯಿ ಅವರ ಪಾರ್ಥೀವ ಶರೀರದ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.