ADVERTISEMENT

ಕಾಶ್ಮೀರ: ಪ್ರಥಮ ಪ್ರಧಾನಿ ನೆಹರೂ ವಿರುದ್ಧ ಕೇಂದ್ರ ಸಚಿವರ ವಾಗ್ದಾಳಿ

ಪಿಟಿಐ
Published 14 ನವೆಂಬರ್ 2022, 14:52 IST
Last Updated 14 ನವೆಂಬರ್ 2022, 14:52 IST
ಕಿರೇನ್ ರಿಜಿಜು
ಕಿರೇನ್ ರಿಜಿಜು   

ನವದೆಹಲಿ (ಪಿಟಿಐ):ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ವಿರುದ್ಧ ಅವರ ಜನ್ಮದಿನದಂದೇ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರದ ಕಾನೂನು ಸಚಿವ ಕಿರೇನ್‌ ರಿಜಿಜು ಹರಿಹಾಯ್ದಿದ್ದಾರೆ.

‘ಭಾರತದ ಜೊತೆಗೆ ಕಾಶ್ಮೀರವನ್ನು ಸೇರ್ಪಡೆಗೊಳಿಸಬೇಕು ಎಂಬ ಅಂದಿನ ಮಹಾರಾಜ ಹರಿಸಿಂಗ್‌ ಅವರ ಮನವಿಯನ್ನು ನೆಹರೂ ಅವರು ಒಂದಲ್ಲ, ಮೂರು ಬಾರಿ ತಿರಸ್ಕರಿಸಿದ್ದರು’ ಎಂದೂ ಟೀಕಿಸಿ ರಿಜಿಜು ಟ್ವೀಟ್ ಮಾಡಿದ್ದಾರೆ.

‘ಪಾಕಿಸ್ತಾನದ ಅತಿಕ್ರಮಣದ ನಂತರ ನೆಹರೂ ಅವರು ತಪ್ಪು ನಿಯಮವನ್ನು ಉಲ್ಲೇಖಿಸಿ ವಿಶ್ವಸಂಸ್ಥೆಯ ಮೊರೆ ಹೋದರು. ಈ ಮೂಲಕ ಪಾಕಿಸ್ತಾನವನ್ನು ಅತಿಕ್ರಮಣಕಾರಿ ಎಂದು ನಿರೂಪಿಸುವ ಬದಲಿಗೆ, ಅದನ್ನೇ ವಿವಾದದ ಭಾಗವಾಗಿಸಿಬಿಟ್ಟರು’ ಎಂದು ಹೇಳಿದ್ದಾರೆ.

ADVERTISEMENT

ಮಹಾರಾಜ ಹರಿಸಿಂಗ್‌ ಅವರ ಪುತ್ರ ಕರಣ್ ಸಿಂಗ್‌ ಅವರೂ ತಪ್ಪಾಗಿಇತಿಹಾಸ ಬಿಂಬಿಸುತ್ತಿದ್ದಾರೆ ಎಂದು ಹರಿಹಾಯ್ದರು.ಖಾಸಗಿ ಟಿ.ವಿ.ವಾಹಿನಿಯಲ್ಲಿ ಈ ಕುರಿತು ಮಾತನಾಡಿದ್ದ ತುಣುಕನ್ನು ರಿಜಿಜು ಅವರು ಟ್ವೀಟ್‌ ಮೂಲಕ ಹಂಚಿಕೊಂಡಿದ್ದಾರೆ.

ಭಾರತದ ಜೊತೆಗೆ ಸೇರಲು ಹರಿಸಿಂಗ್ ಬಯಸಿದ್ದರು ಎಂಬುದು ಜೂನ್ 1947ರಲ್ಲಿಯೇ ನೆಹರೂ ಅವರಿಗೆ ಗೊತ್ತಿತ್ತು. ಅಂದಿನ ವೈಸರಾಯ್ ಮೌಂಟ್‌ಬ್ಯಾಟನ್ ಅವರಿಗೆ ಬರೆದಿದ್ದ ಸಂದೇಶದಲ್ಲಿಯೂ ಇದನ್ನು ಉಲ್ಲೇಖಿಸಿದ್ದರು ಎಂದು ಹೇಳಿದ್ದಾರೆ. ಇತಿಹಾಸವನ್ನು ತಪ್ಪಾಗಿ ನಿರೂಪಿಸುವುದಕ್ಕೆ ಪ್ರತಿರೋಧ ವ್ಯಕ್ತಪಡಿಸಲು, ಜಮ್ಮು ಮತ್ತು ಕಾಶ್ಮೀರ ಜನರ ಜೊತೆಗೆ ದೇಶದ ಜನರು ನಿಲ್ಲಲು ಇದು ಸಕಾಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.