ಕೋರ್ಟ್
ಲಖನೌ: ಅಂಗಿಯ ಗುಂಡಿ ಹಾಕದೇ ನ್ಯಾಯಾಲಯಕ್ಕೆ ಬಂದಿದ್ದ ವಕೀಲರೊಬ್ಬರಿಗೆ 6 ತಿಂಗಳ ಜೈಲು ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ವಿಧಿಸಿದೆ.
ನ್ಯಾಯಮೂರ್ತಿ ವಿವೇಕ್ ಚೌಧರಿ, ನ್ಯಾಯಮೂರ್ತಿ ಬಿ.ಆರ್.ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವು 2021ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಿದೆ.
ಸ್ಥಳೀಯ ವಕೀಲ ಅಶೋಕ್ ಪಾಂಡೆ ಎಂಬುವವರು 2021ರ ಆಗಸ್ಟ್ 18ರಂದು ಅಂಗಿಯ ಗುಂಡಿ ಧರಿಸದೇ ನ್ಯಾಯಾಲಯಕ್ಕೆ ಬಂದಿದ್ದಲ್ಲದೇ, ಸಹ ವಕೀಲರ ಜತೆಗೂ ಅನುಚಿತವಾಗಿ ವರ್ತಿಸಿದ್ದರು. ಅವರ ವಿರುದ್ಧ ಕಾನೂನು ನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಆದರೆ, ವಿಚಾರಣೆಗೂ ಪಾಂಡೆ ಹಾಜರಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ನ್ಯಾಯಪೀಠವು ಪಾಂಡೆಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿ, ಇದು ಪಾಂಡೆ ಹಾಗೂ ಇತರರಿಗೆ ಪಾಠ ಕಲಿಸುವಂತ ಶಿಕ್ಷೆ ಎಂದಿದೆ. ಜತೆಗೆ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ಎದುರು ಹಾಜರಾಗಲು ಪಾಂಡೆಗೆ 4 ವಾರಗಳ ಗಡುವು ನೀಡಿದೆ.
ಇದಲ್ಲದೇ, ₹2000 ದಂಡವನ್ನೂ ವಿಧಿಸಿದ್ದು, ದಂಡ ಪಾವತಿಸುವಲ್ಲಿ ವಿಫಲವಾದರೆ ಹೆಚ್ಚುವರಿಯಾಗಿ 1 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದಿದೆ.
‘ಅಲಹಾಬಾದ್ ಹೈಕೋರ್ಟ್ ಹಾಗೂ ಅದರ ಲಖನೌ ಪೀಠದಲ್ಲಿ ನೀವು ವಕೀಲಿ ವೃತ್ತಿ ಮುಂದುವರಿಸುವುದನ್ನು ನಾವು ಏಕೆ ನಿರ್ಬಂಧಿಸಬಾರದು ಎಂಬುದಕ್ಕೆ ಸೂಕ್ತ ಕಾರಣ ನೀಡಿ’ ಎಂದು ನ್ಯಾಯಪೀಠವು ಶೋಕಾಸ್ ನೋಟಿಸ್ ಜಾರಿಗೊಳಿಸಿ, ಪ್ರತಿಕ್ರಿಯಿಸಲು ಮೇ 1ರವರೆಗೆ ಪಾಂಡೆಗೆ ಕಾಲಾವಕಾಶ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.