ADVERTISEMENT

ಮೋದಿ ಸರ್ಕಾರದಿಂದ ದೇಶದ್ರೋಹ: ಕಾಂಗ್ರೆಸ್

ಬಾಲಾಕೋಟ್ ದಾಳಿಗೂ ಮುನ್ನವೇ ಮಾಹಿತಿ ಸೋರಿಕೆ ಆರೋಪ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 19:30 IST
Last Updated 20 ಜನವರಿ 2021, 19:30 IST
ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಪತ್ರಿಕಾಗೋಷ್ಠಿ    -ಪಿಟಿಐ ಚಿತ್ರ
ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಪತ್ರಿಕಾಗೋಷ್ಠಿ    -ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಸೇನಾ ಕಾರ್ಯಾಚರಣೆಗೆ ಸಂಬಂ‍ಧಿಸಿದ ಅಧಿಕೃತ ರಹಸ್ಯಗಳನ್ನು ಸೋರಿಕೆ ಮಾಡುವುದು ದೇಶದ್ರೋಹ. ಬಾಲಾಕೋಟ್ ದಾಳಿಗೆ ಸಂಬಂಧಿಸಿದ ಮಾಹಿತಿ ಸೋರಿಕೆಯಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗಬೇಕು. ಈ ಕೃತ್ಯದಲ್ಲಿ ತಮ್ಮ ಪಾತ್ರವಿಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಾಬೀತುಮಾಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಬಾರ್ಕ್‌ನ ಮಾಜಿ ಸಿಇಒ ಪಾರ್ಥೋ ದಾಸ್‌ಗುಪ್ತಾ ಅವರ ಮಧ್ಯೆ ನಡೆದಿದೆ ಎನ್ನಲಾದವಾಟ್ಸ್‌ಆ್ಯಪ್‌ ಚಾಟ್‌ನ ಸ್ಕ್ರೀನ್‌ಶಾಟ್‌ಗಳ ಸಂಬಂಧ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ಎ.ಕೆ.ಆ್ಯಂಟನಿ, ಗುಲಾಂ ನಬಿ ಆಜಾದ್, ಸುಶೀಲ್‌ ಕುಮಾರ್ ಶಿಂಧೆ ಮತ್ತು ಸಲ್ಮಾನ್‌ ಖುರ್ಷಿದ್‌ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

‘ಅಧಿಕೃತ ರಹಸ್ಯವನ್ನು ಸೋರಿಕೆ ಮಾಡುವುದು ಅಪರಾಧ ಕೃತ್ಯ. ಸೇನಾ ಕಾರ್ಯಾಚರಣೆ, ರಾಷ್ಟ್ರೀಯ ಭದ್ರತೆ, ಸೇನಾ ದಾಳಿಯಂತಹ ಸೂಕ್ಷ್ಮ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸೋರಿಕೆ ಮಾಡುವುದು ದೇಶದ್ರೋಹವೇ ಸರಿ. ಈ ಕೃತ್ಯ ಎಸಗಿದವರನ್ನು ದೇಶದ್ರೋಹ ಅಪರಾಧದ ಅಡಿ ಶಿಕ್ಷೆಗೆ ಗುರಿ ಮಾಡಬೇಕು. ಅವರಿಗೆ ಕರುಣೆ ತೋರಬಾರದು’ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಗುಲಾಂ ನಬಿ ಆಜಾದ್ ಆಗ್ರಹಿಸಿದರು.

ADVERTISEMENT

ಈ ಮಾಹಿತಿ ಸೋರಿಕೆಯಿಂದ ದೇಶದ ಅತ್ಯುನ್ನತ ಕಚೇರಿಯಾದ ಪ್ರಧಾನಿ ಕಾರ್ಯಾಲಯದ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ. ಈ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಪ್ರಧಾನಿ ಮೋದಿ ಅವರು ತಮ್ಮಿಂದ ಯಾವುದೇ ತಪ್ಪಾಗಿಲ್ಲ ಎಂಬುದನ್ನು ಸಾಬೀತು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಮಾಹಿತಿಯನ್ನು ಸೋರಿಕೆ ಮಾಡಿದ ವ್ಯಕ್ತಿ ಯಾರು ಎಂಬುದನ್ನು ಪತ್ತೆಮಾಡಲು ಯುದ್ಧೋಪಾದಿಯಲ್ಲಿ ತನಿಖೆ ನಡೆಸಬೇಕು. ಈ ಮಾಹಿತಿಯನ್ನು ಸೋರಿಕೆ ಮಾಡಿದವರು ಯಾರೇ ಆಗಿದ್ದರೂ, ಅವರನ್ನು ದೇಶದ್ರೋಹ ಕೃತ್ಯದ ಅಡಿ ಶಿಕ್ಷೆಗೆ ಒಳಪಡಿಸಬೇಕು. ಈ ಮಾಹಿತಿಯನ್ನು ಹೊಂದಿದ್ದ ಪತ್ರಕರ್ತನನ್ನೂ ಶಿಕ್ಷೆಗೆ ಗುರಿ ಮಾಡಬೇಕು. ಅಧಿಕೃತ ರಹಸ್ಯ ಕಾಯ್ದೆ ಅಡಿ ಪ್ರಕರಣ ದಾಖಲಾಗಬೇಕು ಎಂದು ಆ್ಯಂಟನಿ ಒತ್ತಾಯಿಸಿದರು.

ಭಾರತದ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಯಾರೂ ಈ ಪ್ರಮಾಣದಲ್ಲಿ ರಾಜಿ ಮಾಡಿಕೊಂಡಿರಲಿಲ್ಲ. ಪ್ರಧಾನಿ ಕಾರ್ಯಾಲಯ, ಗೃಹ ಸಚಿವರ ಕಚೇರಿ, ಕಾನೂನು ಸಚಿವರ ಕಚೇರಿ, ವಾರ್ತಾ ಮತ್ತು ಪ್ರಸಾರ ಸಚಿವರ ಕಚೇರಿಯನ್ನು ಇಷ್ಟು ಲಜ್ಜೆಗೆಟ್ಟ ರೀತಿಯಲ್ಲಿ ಈವರೆಗೆ ದುರುಪಯೋಗ ಮಾಡಿಕೊಂಡಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿರುವ ವಿವರಗಳು ಆಘಾತಕಾರಿ. ಸರ್ಕಾರವು ಉನ್ನತಮಟ್ಟದಲ್ಲೇ ಎಷ್ಟು ಭ್ರಷ್ಟವಾಗಿದೆ ಎಂಬುದನ್ನು ಈ ಪ್ರಕರಣದ ತನಿಖೆಯು ಬಹಿರಂಗಪಡಿಸಿದೆ. ಆರೋಪಿ ಪತ್ರಕರ್ತನು ಟಿಆರ್‌ಪಿಯನ್ನು ತಿರುಚಲು ಮತ್ತು ಸರ್ಕಾರದ ಪರವಾಗಿ ಅಭಿಪ್ರಾಯ ರೂಪಿಸಲು ಸರ್ಕಾರದ ಉನ್ನತ ಮತ್ತು ಪ್ರಭಾವಿ ವ್ಯಕ್ತಿಗಳ ಜತೆ ಕೈಜೋಡಿಸಿದ್ದಾನೆ. ಸರ್ಕಾರದ ಅತ್ಯಂತ ಪ್ರಭಾವಿ ಸಚಿವರು, ದೇಶದ ನ್ಯಾಯಾಂಗದ ಬಗ್ಗೆ ಆಡಿರುವ ಮಾತುಗಳು ನಾಚಿಕೆಗೇಡೇ ಸರಿ ಎಂದು ಕಾಂಗ್ರೆಸ್ ಟೀಕಿಸಿದೆ.

ಜೆಪಿಸಿ ತನಿಖೆಗೆ ಆಗ್ರಹ?

ಈ ವಿಚಾರವನ್ನು ಜಂಟಿ ಸದನ ಸಮಿತಿಯ (ಜೆಪಿಸಿ) ತನಿಖೆಗೆ ಒಳಪಡಿಸಲು ಆಗ್ರಹಿಸುವುದರ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಸುಶೀಲ್‌ಕುಮಾರ್ ಶಿಂಧೆ ಹೇಳಿದ್ದಾರೆ.

‘ಈ ವಿಚಾರವನ್ನು ಜಂಟಿ ಸದನ ಸಮಿತಿಯ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸುವ ವಿಚಾರದಲ್ಲಿ ನಾನು ಬೇರೆ ಪಕ್ಷಗಳ ಪರವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ. ಮುಂದಿನ ಒಂಬತ್ತು ದಿನಗಳಲ್ಲಿ ಸಂಸತ್ತಿನ ಅಧಿವೇಶನ ಆರಂಭವಾಗಲಿದೆ. ಈ ವಿಚಾರವನ್ನು ಸಂಸತ್ತೇ ನಿರ್ಧರಿಸಲಿ’ ಎಂದು ಆಜಾದ್ ಹೇಳಿದ್ದಾರೆ.

***

ಇಂತಹ ಮಾಹಿತಿಯನ್ನು ಸೋರಿಕೆ ಮಾಡಿದ ನಂತರವೂ ಪ್ರಧಾನಿ, ಗೃಹ ಸಚಿವ, ರಕ್ಷಣಾ ಸಚಿವ ಮತ್ತು ಇಡೀ ಸರ್ಕಾರವೇ ಅಧಿಕಾರದಲ್ಲಿ ಇರುವುದರಲ್ಲಿ ನೈತಿಕತೆ ಇದೆಯೇ?
-ಗುಲಾಂ ನಬಿ ಆಜಾದ್, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ

ಸೇನೆ ಇಂತಹ ಮಾಹಿತಿಯನ್ನು ಬಹಿರಂಗ ಮಾಡುವುದಿಲ್ಲ. ಸರ್ಕಾರದ ಐದು ಅತ್ಯುನ್ನತ ಹುದ್ದೆಯಲ್ಲಿರುವವರಲ್ಲಿ ಒಬ್ಬರು ಮಾತ್ರ ಈ ಮಾಹಿತಿ ಸೋರಿಕೆ ಮಾಡಿರಬಹುದು
-ಎ.ಕೆ.ಆ್ಯಂಟನಿ, ಕಾಂಗ್ರೆಸ್ ನಾಯಕ ಮತ್ತು ಮಾಜಿ ರಕ್ಷಣಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.