ಲೇಹ್ : ಮೊಬೈಲ್ ಇಂಟರ್‌ನೆಟ್ ಬಳಕೆಯ ಮೇಲೆ ಹೇರಲಾಗಿದ್ದ ನಿರ್ಬಂಧವನ್ನು ಲೇಹ್ ಜಿಲ್ಲಾಡಳಿತ ಶುಕ್ರವಾರ ತೆರವುಗೊಳಿಸಿದೆ.
ಜನರು ವಾಟ್ಸ್‌ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ಬಳಸಬಹುದು. ಆದರೆ, ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಡಿದರೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಹೇರಿರುವ ನಿರ್ಬಂಧವು ಮುಂದಿನ ಎರಡು ತಿಂಗಳು ಜಾರಿಯಲ್ಲಿ ಇರಲಿದೆ. ವಾಟ್ಸ್‌ಆ್ಯಪ್ ಗುಂಪುಗಳ ಅಡ್ಮಿನ್‌ಗಳು ಸುಳ್ಳು ಸುದ್ದಿ ತಮ್ಮ ಗುಂಪುಗಳ ಮೂಲಕ ಹರಡದಂತೆ ತಡೆಯಬೇಕು. ಇಂತಹ ಸಂದೇಶ ಕಂಡುಬಂದರೆ ತಕ್ಷಣ ಅಳಿಸಿ ಹಾಕಬೇಕು. ಇದಕ್ಕಾಗಿ ಗುಂಪುಗಳಲ್ಲಿ ‘ಅಡ್ಮಿನ್ ಓನ್ಲಿ’ ಆಯ್ಕೆಯನ್ನು ಸಕ್ರಿಯಗೊಳಿಸಿ ಇಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರೊಮಿಲ್ ಸಿಂಗ್ ಡಂಕ್ ಆದೇಶದಲ್ಲಿ ತಿಳಿಸಿದ್ದಾರೆ.
ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಕಳೆದ ತಿಂಗಳು ಲೇಹ್‌ನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ಸಂಘರ್ಷ ಉಲ್ಬಣಗೊಂಡು, ನಾಲ್ವರು ಮೃತಪಟ್ಟು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಸೆ.24ರಿಂದ ಮೊಬೈಲ್ ಇಂಟರ್‌ನೆಟ್ ಬಳಕೆಯ ಮೇಲೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.