ADVERTISEMENT

ನಿರ್ಮಾಣ ಹಂತದಲ್ಲಿರುವ ಕಟ್ಟಡದೊಳಗೆ ನುಗ್ಗಿದ ಚಿರತೆ; ಏಳು ಮಂದಿಗೆ ಗಾಯ

ಏಜೆನ್ಸೀಸ್
Published 4 ಫೆಬ್ರುವರಿ 2019, 9:59 IST
Last Updated 4 ಫೆಬ್ರುವರಿ 2019, 9:59 IST
   

ಪುಣೆ: ಆಹಾರ ಹುಡುಕುತ್ತ ಕಾಡಿನಿಂದ ನಾಡಿನೊಳಗೆ ಚಿರತೆ ಪ್ರವೇಶ ಈಗಾಂತೂ ಸಾಮಾನ್ಯ ಎನ್ನುವಂತಾಗಿದೆ. ಗ್ರಾಮದಲ್ಲಿ ಕುರಿ, ಕುಳಿ, ನಾಯಿ,..ಹೀಗೆ ಸಿಗುವ ಯಾವುದೇ ಪ್ರಾಣಿಗಳ ಮೇಲೆ ದಾಳಿ ನಡೆಸಿ ಹಸಿವಿನ ದಾಹ ತೀರಿಸಿಕೊಳ್ಳುತ್ತಿರುವ ಚಿರತೆಗಳು ಮನೆಗಳಿಗೂ ನುಗ್ಗುತ್ತಿವೆ. ಇಲ್ಲಿನ ಮಂಧ್ವ ಪ್ರದೇಶದಲ್ಲಿ ಸೋಮವಾರ ಚಿರತೆಯೊಂದು ನಿರ್ಮಾಣ ಹಂತದಲ್ಲಿರುವ ಕಟ್ಟಡದೊಳಗೆ ನುಗ್ಗಿ ಏಳು ಮಂದಿಯನ್ನು ಗಾಯಗೊಳಿಸಿದೆ.

ಮಗು, ಹಿರಿಯ ವಯಸ್ಸಿನ ಮಹಿಳೆ ಸೇರಿ ಏಳು ಮಂದಿ ಗಾಯಗೊಂಡಿದ್ದಾರೆ. ಎಲ್ಲರೂ ಪ್ರಣಾಪಾಯದಿಂದ ಪಾರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಹಸಿದಿರುವ ಚಿರತೆಯನ್ನು ಸೆರೆಹಿಡಿದು ನಗರದ ಕಾತ್ರಜ್‌ ವನ್ಯ ಜೀವಿಗಳ ರಕ್ಷಣಾ ಕೇಂದ್ರಕ್ಕೆ ತಲುಪಿಸಲಾಗಿದೆ.

ಕೇಶವನಗರದಲ್ಲಿ ನಿರ್ಮಾಣ ಹಂತದಲ್ಲಿರುವ 14 ಅಂತಸ್ತಿನ ’ವರ್ಟಿಕಲ್‌ ಇನ್ಫ್ರಾ’ ಸೊಸೈಟಿ ಕಟ್ಟಡದೊಳಗೆ ಬೆಳಿಗ್ಗೆ 6 ಗಂಟೆ ಸುಮಾರಿಗೆ ಚಿರತೆ ಪ್ರವೇಶಿಸಿದೆ. ಜನದಟ್ಟಣೆ ಹೊಂದಿರುವ ಈ ಪ್ರದೇಶದಲ್ಲಿ ಹಲವು ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. ಮೂಲಗಳ ಪ್ರಕಾರ, ಚಿರತೆ ಮೊದಲಿಗೆ ಏಳು ವರ್ಷದ ಮಗುವಿನ ಮೇಲೆ ದಾಳಿ ಮಾಡಿದೆ. ಮಗುವನ್ನು ರಕ್ಷಿಸಲು ಬಂದ ಕಾರ್ಮಿಕರೂ ದಾಳಿಗೆ ಒಳಗಾಗಿದ್ದಾರೆ.

ADVERTISEMENT

ಕಾರ್ಮಿಕರು ವಿಷಯವನ್ನು ಪೊಲೀಸರು ಹಾಗೂ ಇತರರಿಗೆ ತಲುಪಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕ ವಾಹನಗಳು ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಗುಂಪು ಸೇರುತ್ತಿದ್ದ ಜನರನ್ನು ಕಂಡು ಗಾಬರಿಯಾದ ಚಿರತೆ ಸ್ಥಳ ಸಿಕ್ಕಲಿಗೆ ಜಿಗಿದು ಸಿಲುಕಿದೆ. ಚಿರತೆಯನ್ನು ಸೆರೆಹಿಡಿಯಲು ಸುಮಾರು ಎರಡು ಗಂಟೆಗಳ ಕಾರ್ಯಾಚರಣೆ ನಡೆಸಲಾಗಿದೆ. ಈ ಪ್ರಯತ್ನದಲ್ಲಿ ಕಾತ್ರಾಜ್‌ ವನ್ಯ ಜೀವಿ ರಕ್ಷಣಾ ಕೇಂದ್ರದ ಸದಸ್ಯ, ಒಬ್ಬ ಅರಣ್ಯ ರಕ್ಷಕ ಹಾಗೂ ಪೊಲೀಸ್‌ ಗಾಯಗೊಂಡಿದ್ದಾರೆ.

ವಾರದ ಹಿಂದೆ ನಾಸಿಕ್‌ ನಗರದಲ್ಲಿ ಇಂಥದ್ದೇ ಘಟನೆ ನಡೆದಿತ್ತು. ಜನದಟ್ಟಣೆಯಿರುವ ಪ್ರದೇಶಕ್ಕೆ ನುಗ್ಗಿದ್ದ ಚಿರತೆ ಇಬ್ಬರು ಮಾಧ್ಯಮ ಪ್ರತಿನಿಧಿಗಳು, ಶಿವ ಸೇನೆಯ ಕಾರ್ಪೊರೇಟರ್‌ ಸೇರಿ ನಾಲ್ವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಅರಣ್ಯ ಸಿಬ್ಬಂದಿ ಚಿರತೆಯನ್ನು ಸೆರೆಹಿಡಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.