ತಿರುವನಂತಪುರ: ಕೇಂದ್ರ ಸಚಿವ ಮತ್ತು ಕೇರಳದ ಬಿಜೆಪಿ ಸಂಸದ ಸುರೇಶ್ ಗೋಪಿ ಚಿರತೆ ಹಲ್ಲುಗಳನ್ನು ಧರಿಸಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ಆರಂಭವಾಗಿದೆ.
ನಟ, ರಾಜಕಾರಣಿ ಕೊರಳಿಗೆ ಹಾಕಿಕೊಂಡಿದ್ದ ಚೈನ್‌ನಲ್ಲಿ ಚಿರತೆ ಹಲ್ಲು ಇರುವುದು ಚಿತ್ರದಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.
ಚಿರತೆ ಹಲ್ಲುಗಳನ್ನು ಹೊಂದಿದ ಆರೋಪದಡಿ ಮಲಯಾಳಂ ರ‍್ಯಾಪರ್ ಹಿರಂದಾಸ್ ಮುರಳಿ ವಿರುದ್ಧ ಅರಣ್ಯ ಇಲಾಖೆ ಏಪ್ರಿಲ್‌ನಲ್ಲಿ ಪ್ರಕರಣ ದಾಖಲಿಸಿತ್ತು. ಆ ಬಳಿಕ ಈ ರೀತಿಯ ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳನ್ನು ಧರಿಸಿರುವವರ ವಿರುದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಈ ನಡುವೆ, ಚಿರತೆ ಹಲ್ಲುಗಳನ್ನು ಧರಿಸಿರುವ ಸುರೇಶ್ ಗೋಪಿ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು.
ಈ ಸಂಬಂಧ ತಮ್ಮ ದೂರಿಗೆ ಅನುಗುಣವಾಗಿ ವಿವರವಾದ ಹೇಳಿಕೆಗಳು ಮತ್ತು ಪುರಾವೆಗಳನ್ನು ನೀಡುವಂತೆ ದೂರುದಾರರಿಗೆ ಅರಣ್ಯ ಇಲಾಖೆಯು ಸೂಚಿಸಿದ್ದು, ವಿಚಾರಣೆಯನ್ನು ಪ್ರಾರಂಭಿಸಿದೆ. ಸುರೇಶ್ ಗೋಪಿಯವರ ಹೇಳಿಕೆಯನ್ನು ಶೀಘ್ರದಲ್ಲೇ ದಾಖಲಿಸುವ ಸಾಧ್ಯತೆಯಿದೆ.
ಚಿರತೆಯನ್ನು ವನ್ಯಜೀವಿ ರಕ್ಷಣಾ ಕಾಯ್ದೆಯ ಶೆಡ್ಯೂಲ್ Iರ ಅಡಿಯಲ್ಲಿ ಪಟ್ಟಿ ಮಾಡಲಾಗಿದ್ದು, ಚಿರತೆ ಹಲ್ಲುಗಳನ್ನು ಹೊಂದಿರುವುದು ಅಪರಾಧವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.