ADVERTISEMENT

ರಕ್ಷಣಾ ಪಡೆಗಳಿಗೆ ₹1ಲಕ್ಷ ಕೋಟಿ ಕಡಿಮೆ ಅನುದಾನ: ಸಂಸದರ ಸಮಿತಿ ವರದಿಯಲ್ಲಿ ಬಹಿರಂಗ

ರಕ್ಷಣಾ ಪಡೆಗಳಿಗೆ ಅನುದಾನ: ಸಂಸದರ ಸಮಿತಿ ವರದಿಯಲ್ಲಿ ಬಹಿರಂಗ

ಪಿಟಿಐ
Published 25 ಡಿಸೆಂಬರ್ 2019, 20:12 IST
Last Updated 25 ಡಿಸೆಂಬರ್ 2019, 20:12 IST
A
A   

ನವದೆಹಲಿ: ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವ ಕೇಂದ್ರ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ರಕ್ಷಣಾ ಪಡೆಗಳಿಗೆ ₹1ಲಕ್ಷ ಕೋಟಿಯಷ್ಟು ಕಡಿಮೆ ಅನುದಾನ ನೀಡಿದೆ.

ಈ ವಿಷಯವನ್ನು ಸಂಸದರ ಸಮಿತಿಯ ವರದಿ ಬಹಿರಂಗಪಡಿಸಿದೆ. ಅನುದಾನ ಕೊರತೆಯಿಂದಾಗಿ, ಭೂಸೇನೆ, ವಾಯುಪಡೆ ಮತ್ತು ನೌಕಾ ಪಡೆ ತಮ್ಮ ಅಗತ್ಯಗಳನ್ನು ಬದಲಾಯಿಸಿ ಕೊಳ್ಳುವ ಅನಿವಾರ್ಯತೆಯಲ್ಲಿ ಸಿಲುಕಿವೆ ಎಂದು ಪ್ರಸಕ್ತ ವರ್ಷದ ರಕ್ಷಣಾ ಇಲಾಖೆಯ ಬಜೆಟ್‌ ಪರಾಮರ್ಶಿಸಿರುವ ಸಮಿತಿಯ ವರದಿ ತಿಳಿಸಿದೆ.

ಅನುದಾನ ಕಡಿಮೆಯಾಗಿದ್ದರಿಂದ ರಕ್ಷಣಾ ಪಡೆಗಳ ಆಧುನೀಕರಣ ಮತ್ತು ದಿನನಿತ್ಯದ ತರಬೇತಿ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಪ್ರಮುಖವಾಗಿ ಚೀನಾ–ಭಾರತ ಗಡಿಯಲ್ಲಿ ರಸ್ತೆ ಮತ್ತು ಈಗಾಗಲೇ ವಿಳಂಬವಾಗಿರುವ ರೋಹ್ಟಂಗ್‌ ಸುರಂಗ ನಿರ್ಮಾಣದಂತಹ ಯೋಜನೆಗಳ ಅನುಷ್ಠಾನಕ್ಕೂ ಅಡ್ಡಿಯಾಗಿದೆ.

ADVERTISEMENT

ಪೂರಕ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ದೊರೆಯಬಹುದು ಎಂದು ಸೇನೆಯ ಮೂಲಗಳು ತಿಳಿಸಿವೆ. ಆದರೆ, ಈ ಹಿಂದಿನ ಎರಡು ಹಣಕಾಸು ವರ್ಷಗಳಲ್ಲಿ ಪೂರಕ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ಹೆಚ್ಚುವರಿಯಾಗಿ ಅನುದಾನ ಹಂಚಿಕೆಯಾಗಿಲ್ಲ ಎಂದು ಸಂಸದೀಯ ಸ್ಥಾಯಿ ಸಮಿತಿಗೆ ನೀಡಿರುವ ಮಾಹಿತಿಯಿಂದ ಗೊತ್ತಾಗಿದೆ.

ಬಜೆಟ್‌ನಲ್ಲಿ ಕಡಿಮೆ ಅನುದಾನ ಮೀಸಲಿಡುತ್ತಿರುವ ಬಗ್ಗೆ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಕರಂಭೀರ್‌ ಸಿಂಗ್‌ ಅವರು ಈ ತಿಂಗಳ ಆರಂಭದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದ್ದರು.‘ಈಚಿನ ವರ್ಷಗಳಲ್ಲಿ ಬಜೆಟ್‌ನಲ್ಲಿ ಅನುದಾನ ಶೇ 18ರಿಂದ ಶೇ 13ಕ್ಕೆ ಕಡಿಮೆಯಾಗಿದೆ’ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.