ADVERTISEMENT

ಸ್ಫೋಟ ಪ್ರಕರಣಗಳ ಆರೋಪಿ ಎಲ್‌ಇಟಿ ಉಗ್ರನ ಬಂಧನ

ಪಿಟಿಐ
Published 2 ಫೆಬ್ರುವರಿ 2023, 14:08 IST
Last Updated 2 ಫೆಬ್ರುವರಿ 2023, 14:08 IST
.
.   

ಜಮ್ಮು: ಹಲವು ಸ್ಫೋಟ ಪ್ರಕರಣಗಳಲ್ಲಿ ಆರೋಪಿಯಾಗಿರುವ ಲಷ್ಕರ್‌ ಎ ತಯಬಾ (ಎಲ್‌ಇಟಿ) ಉಗ್ರನನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್‌ ಸಿಂಗ್‌ ಗುರುವಾರ ಹೇಳಿದ್ದಾರೆ.

ರಿಯಾಸಿ ಜಿಲ್ಲೆಯ ಆರಿಫ್‌ ಬಂಧಿತ ಉಗ್ರ. ವೈಷ್ಣೊದೇವಿ ಯಾತ್ರಿಕರು ಪ್ರಯಾಣಿಸುತ್ತಿದ್ದ ಬಸ್‌ ಸ್ಪೋಟ ಪ್ರಕರಣ ಸೇರಿದಂತೆ ಹಲವೆಡೆ ನಡೆದ ಬಾಂಬ್‌ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಈತನ ಮೇಲಿದೆ ಎಂದೂ ತಿಳಿಸಿದ್ದಾರೆ.

ಜಮ್ಮು ಪ್ರದೇಶದಲ್ಲಿ ಕೋಮು ಸಾಮರಸ್ಯ ಕದಡುವ ಮತ್ತು ಭಯೋತ್ಪಾದನಾ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಈತ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎಂದೂ ವಿವರಿಸಿದ್ದಾರೆ.

ADVERTISEMENT

ಜಮ್ಮುವಿನ ನರ್ವಾಲ್‌ನಲ್ಲಿ ಈಚೆಗೆ ನಡೆದ ಅವಳಿ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿದ್ದಾಗ ಆರಿಫ್‌ನ ಸುಳಿವು ಸಿಕ್ಕಿದ್ದು, ಬಳಿಕ ಆತನನ್ನು ಬಂಧಿಸಲಾಗಿದೆ ಎಂದೂ ದಿಲ್ಬಾಗ್‌ ಸಿಂಗ್‌ ಹೇಳಿದ್ದಾರೆ.

ಸುಗಂಧ ದ್ರವ್ಯದ ಬಾಟಲಿಯೊಳಗೆ ಅಳವಡಿಸಲಾಗಿದ್ದ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ವಶಪಡಿಸಿಕೊಳ್ಳಲಾಗಿದ್ದು, ಇಂತಹ ಬಾಂಬ್‌ ಅನ್ನು ಈ ಪ್ರದೇಶದಿಂದ ಮೊದಲ ಬಾರಿಗೆ ವಶಪಡಿಸಿಕೊಳ್ಳಲಾಗಿದೆ ಎಂದೂ ತಿಳಿಸಿದ್ದಾರೆ.

‘ಆರಿಫ್‌ ಸರ್ಕಾರಿ ಶಾಲೆಯ ಶಿಕ್ಷಕನಾಗಿದ್ದು, ಎಲ್‌ಇಟಿ ಉಗ್ರರ ಜೊತೆಗೆ ನಂಟು ಬೆಳೆಸಿಕೊಂಡ ಬಳಿಕ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಶಾಮೀಲಾಗಿದ್ದಾನೆ’ ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.