ADVERTISEMENT

‘ಫಲಾಹ್‌ ಇ ಇನ್ಸಾನಿಯತ್‌’ ಇನ್ನೂ ಕ್ರಿಯಾಶೀಲ

‘ಉಗ್ರ ಕೃತ್ಯಗಳಿಗೆ ಲಾಭಯೇತರ ಸಂಘಗಳ ದುರ್ಬಳಕೆ ತಡೆ ಅಗತ್ಯ‘: ಗೃಹ ಖಾತೆ ರಾಜ್ಯ ಸಚಿವ ಕಿಚನ್‌ ರೆಡ್ಡಿ

ಪಿಟಿಐ
Published 8 ನವೆಂಬರ್ 2019, 20:15 IST
Last Updated 8 ನವೆಂಬರ್ 2019, 20:15 IST

ನವದೆಹಲಿ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ‘ಲಷ್ಕರ್ ಎ ತೊಯಬಾ’ ಮುಖ್ಯಸ್ಥ ಉಗ್ರ ಹಫೀಸ್‌ ಸಯೀದ್‌ ಸ್ಥಾಪಿಸಿದ್ದ ‘ಫಲಾಹ್‌ ಇ ಇನ್ಸಾನಿಯತ್‌’ ಪ್ರತಿಷ್ಠಾನ’ ಇನ್ನೂ ಸೈಬರ್‌ ಕ್ಷೇತ್ರದಲ್ಲಿ ಸಕ್ರಿಯವಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಷನ್‌ ರೆಡ್ಡಿ ಶುಕ್ರವಾರ ಹೇಳಿದರು.

ಕೆಲವು ದೇಶಗಳಲ್ಲಿ ಲಾಭಯೇತರ ಉದ್ದೇಶದ ಸಂಸ್ಥೆಗಳನ್ನು ಮೂಲಭೂತವಾದ ಪ್ರಚಾರ, ಹಣ ವರ್ಗಾವಣೆ ಉದ್ದೇಶಗಳಿಗೆ ದುರ್ಬಳಕೆ ಆಗುತ್ತಿದೆ ಎಂದು ಪರೋಕ್ಷವಾಗಿ ಪಾಕ್‌ ಮೂಲದ ಸಂಘ ಉಲ್ಲೇಖಿಸಿ ಹೇಳಿದರು.

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ‘ನೋ ಮನಿ ಫಾರ್‌ ಟೆರರ್‌’ ಸಮಾವೇಶದ ಎರಡನೇ ದಿನ ‘ಹೊಸ ತಂತ್ರಜ್ಞಾನ ಮತ್ತು ಭಯೋತ್ಪಾದಕತೆಗೆ ಆರ್ಥಿಕತೆಯ ಅಪಾಯ’ ವಿಷಯ ಕುರಿತು ಮಾತನಾಡಿದರು.

ADVERTISEMENT

‘ಪ್ರತಿಷ್ಠಾನದ ಸ್ಥಾಪಕ ಹಫೀಸ್‌ ಸಯೀದ್, ಲಷ್ಕರ್ ಇ ತೊಯಬಾ ಉಗ್ರ ಸಂಘಟನೆಯ ಮುಖ್ಯಸ್ಥನೂ ಆಗಿದ್ದಾನೆ. ಅಮೆರಿಕ ಇದನ್ನು ಗುರುತಿಸಿದ ನಂತರವೂ ಪ್ರತಿಷ್ಠಾನ ಸೈಬರ್ ಕ್ಷೇತ್ರದಲ್ಲಿ ಸಕ್ರಿಯವಾಗಿದೆ’ ಎಂದು ತಿಳಿಸಿದರು.

ಲಾಭಯೇತರ ಉದ್ದೇಶದ ಸಂಘಗಳ ದುರ್ಬಳಕೆಯನ್ನು ತಡೆಯುವ ಅಗತ್ಯವನ್ನು ಪ್ರತಿಪಾದಿಸಿದ ಅವರು, ಝಾಕೀರ್‌ ನಾಯ್ಕ್‌ ಸ್ಥಾಪಿಸಿದ್ದ ಮುಂಬೈ ಮೂಲದ ಇಸ್ಲಾಮಿಕ್‌ ರೀಸರ್ಚ್ ಫೌಂಡೇಷನ್‌ (ಐಆರ್‌ಎಫ್‌) ವಿರುದ್ಧ ಭಾರತ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದನ್ನು ಉಲ್ಲೇಖಿಸಿದರು.

ಭಯೋತ್ಪಾದಕ ಚಿಂತನೆಗಳನ್ನು ಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ಐಆರ್‌ಎಫ್‌ ಸಂಘಟನೆಯನ್ನು ಭಾರತ ಸರ್ಕಾರ ನಿಷೇಧಿಸಿದೆ ಎಂದು ಹೇಳಿದರು.

ಐವರು ಸದಸ್ಯರಿರುವ ಉನ್ನತ ಮಟ್ಟದ ನಿಯೋಗದ ನೇತೃತ್ವವನ್ನು ಕಿಶನ್‌ ರೆಡ್ಡಿ ವಹಿಸಿದ್ದಾರೆ. ನಿಯೋಗದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆಯ ಮಾಜಿ ಪ್ರಧಾನ ನಿರ್ದೇಶಕ ವೈ.ಸಿ.ಮೋದಿ ಅವರು ಇದ್ದಾರೆ.

ಸಮಾವೇಶದಲ್ಲಿ 65 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಎಗ್ಮೊಂಟ್‌ ಗ್ರೂಪ್‌ ಎಂದು ಹೆಸರಿಸಲಾದ ವಿವಿಧ 100 ರಾಷ್ಟ್ರಗಳ ಆರ್ಥಿಕ ಬುದ್ದಿಮತ್ತೆ ವಿಭಾಗವು ಇದನ್ನು ಆಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.