ಎಐ ಚಿತ್ರ
ಲತೇಹರ್ (ಜಾರ್ಖಂಡ್): ಸಿಡಿಲು ಬಡಿದು ಮೃತಪಟ್ಟ ದನಗಾಹಿಯೊಬ್ಬರನ್ನು ಅವರ ಸಂಬಂಧಿಕರು ಸಗಣಿಯಲ್ಲಿ ಹೂತಿಟ್ಟ ಘಟನೆ ಭಾನುವಾರ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ್‌ನಾಥ್ ಯಾದವ್(45) ಎನ್ನುವ ರೈತ ದನಕಾಯಲು ಪತ್ನಿಯ ಜೊತೆ ತೆರಳಿದ್ದ ವೇಳೆ ಸಿಡಿಲು ಬಡಿದು ಕುಸಿದು ಬಿದ್ದಿದ್ದಾರೆ. ಅವರನ್ನು ಸಂಬಂಧಿಕರು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆಯಲ್ಲಿ ಅವರ ಪತ್ನಿಯೂ ಗಂಭೀರ ಗಾಯಗೊಂಡಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸದೇ, ಮರಣೋತ್ತರ ಪರೀಕ್ಷೆಗೆ ಮುನ್ನ ರಾಮ್‌ನಾಥ್ ಅವರ ಮೃತದೇಹವನ್ನು ಸಂಬಂಧಿಕರು ತೆಗೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯ ದೂರಿನ ಮೇಲೆ ಮೃತರ ಮನೆಗೆ ತೆರಳಿದಾಗ ಮೃತದೇಹವನ್ನು ಸಗಣಿಯಲ್ಲಿ ಹೂತಿಟ್ಟಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಕೊಡುವಂತೆ ಮನವಿ ಮಾಡಿದೆವು. ಸಿಡಿಲು ಬಡಿದ ವ್ಯಕ್ತಿಯನ್ನು ಸಗಣಿಯಲ್ಲಿಟ್ಟರೆ, ಅದು ಸಿಡಿಲನ್ನು ಹೀರಿಕೊಂಡು ವ್ಯಕ್ತಿ ಮರಳಿ ಬದುಕುತ್ತಾರೆ ಎಂದು ಸಂಬಂಧಿಕರು ವಾದ ಮಾಡಿದರು. ಇದು ಸಾಧ್ಯವಿಲ್ಲವೆಂದು ವೈದ್ಯರು ತಿಳಿ ಹೇಳಿದರು ಕೂಡ ಅವರು ಒಪ್ಪಿಕೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.
ಸಿಡಿಲು ಬಡಿದು ಮೃತಪಟ್ಟಾಗ ಮರಣೋತ್ತರ ಪರೀಕ್ಷೆಯಾದರೆ ಮಾತ್ರ ಅಸಹಜ ಸಾವು ಎಂದು ದಾಖಲಿಸಿಕೊಂಡು, ವಿಪತ್ತು ನಿರ್ವಹಣಾ ನಿಯಮಗಳ ಅಡಿಯಲ್ಲಿ ಪರಿಹಾರವನ್ನು ಪಡೆಯಲು ಸಾಧ್ಯ ಎಂದು ಮನವೊಲಿಸಿದ ನಂತರ ಮೃತದೇಹವನ್ನು ಹಸ್ತಾಂತರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.