ಗಯಾ(ಬಿಹಾರ): ‘ನಿಮ್ಮ ಹಾಗೆ... ನಾನು ಕೂಡ ಮದುವೆಯಾಗದೇ ಇರುವುದಕ್ಕೆ ನಿರ್ಧರಿಸಿದ್ದೇನೆ...’ ‘ಪ್ಯಾಡ್ ಗರ್ಲ್’ ಖ್ಯಾತಿಯ ರಿಯಾ ಪಾಸ್ವಾನ್ ಅವರ ಈ ಮಾತು ಕೇಳಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಗುಳ್ನಕ್ಕರು.
ಬಿಹಾರ ಪ್ರವಾಸದ ವೇಳೆ ಶುಕ್ರವಾರ ಗಯಾದಲ್ಲಿ ನಡೆದ ‘ಮಹಿಳಾ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಅವರು, ಮಹಿಳೆಯರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ರಿಯಾ ಪಾಸ್ವಾನ್ ಅವರು ರಾಹುಲ್ ಗಾಂಧಿ ಅವರ ಗಮನ ಸೆಳೆದಿದ್ದಾರೆ.
‘ಶಿಕ್ಷಣದಂತಹ ವಿವಿಧ ಕ್ಷೇತ್ರಗಳನ್ನು ಸುಧಾರಿಸಲು ರಾಜಕೀಯವು ಮೊದಲ ಹೆಜ್ಜೆಯಾಗಿದೆ. ಆದರೆ ಅನೇಕರು ವಿಶೇಷವಾಗಿ ಮಹಿಳೆಯರು ಈ ಕ್ಷೇತ್ರಕ್ಕೆ ಸೇರುವುದಿಲ್ಲ’ ಎಂಬ ಪಾಸ್ವಾನ್ ಮಾತಿಗೆ ರಾಹುಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನೀವು(ರಿಯಾ ಪಾಸ್ವಾನ್) ಅತ್ಯುತ್ತಮವಾಗಿ ಮಾತನಾಡುತ್ತೀರಿ... ನಿಮ್ಮ ಸಂಪೂರ್ಣ ಕಥೆ ಹೇಳಿ’ ಎಂದಿದ್ದಾರೆ.
‘ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಕಾಂಗ್ರೆಸ್ ಆರಂಭಿಸಿದ ‘ಶಕ್ತಿ ಅಭಿಯಾನ’ದಲ್ಲಿ ನಾನು ನನ್ನನ್ನು ತೊಡಗಿಸಿಕೊಂಡಿದ್ದೇನೆ. ನಾನೊಬ್ಬಳು ಸ್ಲಂ ನಿವಾಸಿಯಾಗಿದ್ದು, ನನ್ನಂತೆಯೇ ಆ ಪ್ರದೇಶದಲ್ಲಿ ವಾಸಿಸುವ ದೊಡ್ಡ ತಂಡವೇ ಇದೆ. ಶಕ್ತಿ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಜನರ ಸಣ್ಣ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇನೆ. ಈಗ ಜನರಿಗೆ ಯಾವುದೇ ಸಮಸ್ಯೆ ಇದ್ದರೂ ಅವರು ನಮ್ಮ ಬಳಿಗೆ ಬರುತ್ತಿದ್ದಾರೆ’ ಎಂದು ಹೇಳಿದ್ದಾರೆ.
‘ರಾಜಕೀಯ ಸೇರಲು ನನಗೆ ತುಂಬಾ ಆಸಕ್ತಿಯಿದೆ. ರಾಜಕೀಯ ನಾಯಕಿಯಾಗಿ ಸಾರ್ವಜನಿಕರಿಗಾಗಿ ಕೆಲಸ ಮಾಡಲು ಬಯಸುತ್ತೇನೆ. ಶಕ್ತಿ ಅಭಿಯಾನದಲ್ಲಿ ಭಾಗವಹಿಸುತ್ತಾ ರಾಜಕೀಯದ ಬಗ್ಗೆ ತಿಳಿದುಕೊಂಡೆ’ ಎಂದು ತಿಳಿಸಿದ್ದಾರೆ.
ಇದೇ ವೇಳೆ, ‘ನಿಮ್ಮ ಹಾಗೆ ನಾನೂ ಮದುವೆಯಾಗದಿರಲು ನಿರ್ಧರಿಸಿದ್ದೇನೆ’ ಎಂದಿದ್ದಾರೆ. ಪಾಸ್ವಾನ್ ಮಾತಿಗೆ ರಾಹುಲ್ ಸೇರಿ ಸಭೆಯಲ್ಲಿದ್ದವರೆಲ್ಲ ಜೋರಾಗಿ ನಕ್ಕಿದ್ದಾರೆ.
‘ಪ್ಯಾಡ್ ಗರ್ಲ್ ಪಾಸ್ವಾನ್’
ಸಬ್ಸಿಡಿ ದರದಲ್ಲಿ ಸ್ಯಾನಿಟರಿ ಪ್ಯಾಡ್ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದ ಪಾಸ್ವಾನ್, 2022ರಲ್ಲಿ ಆಗಿನ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ ಅವರನ್ನು ಈ ಕುರಿತು ಪ್ರಶ್ನಿಸಿದ್ದರು.
‘ವಿದ್ಯಾರ್ಥಿನಿಯರಿಗೆ ಶಾಲಾ ಉಡುಗೆ, ವಿದ್ಯಾರ್ಥಿ ವೇತನ, ಸೈಕಲ್ ಮತ್ತು ಇತರ ಹಲವು ಸೌಲಭ್ಯಗಳನ್ನು ನೀಡುತ್ತಿರುವಾಗ, ₹20 ರಿಂದ ₹30 ರೂಪಾಯಿಗಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಲು ಸಾಧ್ಯವಿಲ್ಲವೇ?’ ಎಂದು ಕೇಳಿದ್ದರು.
ಇದಕ್ಕೆ ಕೋಪಗೊಂಡ ಐಎಎಸ್ ಅಧಿಕಾರಿ, ‘ಇವತ್ತು ಸಬ್ಸಿಡಿ ದರದಲ್ಲಿ ಪ್ಯಾಡ್ ಕೊಡಿ ಎಂದು ಕೇಳುತ್ತೀರಿ, ನಾಳೆ ಜೀನ್ಸ್ ಪ್ಯಾಂಟ್–ಬೂಟು ಕೊಡಿ ಎಂದು ಕೇಳುತ್ತೀರಿ’ ಎಂದು ಹೇಳಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ವಿದ್ಯಾರ್ಥಿನಿ ರಿಯಾ ಪಾಸ್ವಾನ್ ಧೈರ್ಯಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಅಂದಿನಿಂದ ‘ಪ್ಯಾಡ್ ಗರ್ಲ್’ ಎಂದೇ ಅವರು ಗುರುತಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.