ADVERTISEMENT

ಮದುವೆಯಾಗದೇ ಒಟ್ಟಿಗೆ ಬದುಕುವುದನ್ನು ಸಾಮಾಜಿಕವಾಗಿ ಒಪ್ಪಲಾಗದು -ಹೈಕೋರ್ಟ್‌

ಪಂಜಾಬ್‌–ಹರಿಯಾಣ ಹೈಕೋರ್ಟ್‌ ಅಭಿಮತ

ಪಿಟಿಐ
Published 18 ಮೇ 2021, 10:59 IST
Last Updated 18 ಮೇ 2021, 10:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಚಂಡೀಗಡ: ‘ಮದುವೆಯಾಗದೇ ಒಟ್ಟಿಗೆ ಬದುಕುವುದನ್ನು ಸಾಮಾಜಿಕವಾಗಿ ಹಾಗೂ ನೈತಿಕವಾಗಿ ಒಪ್ಪಲಾಗದು’ ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಹೇಳಿದೆ.

ಗುಲ್ಜಾಕುಮಾರಿ (19) ಹಾಗೂ ಗುರ್ವಿಂದರ್‌ ಸಿಂಗ್‌ (22) ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಎಚ್‌.ಎಸ್‌.ಮದಾನ್‌ ಈ ಅಭಿಪ್ರಾಯ ವ್ಯಕ್ತಪಡಿಸಿದರು.

‘ನಾವು ಮದುವೆಯಾಗಲು ಬಯಸಿದ್ದೇವೆ. ಗುಲ್ಜಾಕುಮಾರಿ ಪಾಲಕರಿಂದ ನಮ್ಮ ಜೀವಕ್ಕೆ ಅಪಾಯ ಇದೆ. ಹೀಗಾಗಿ ರಕ್ಷಣೆ ನೀಡಬೇಕು’ ಎಂದು ಕೋರಿ ಅವರು ಸಲ್ಲಿಸಿದ್ದರು.

ADVERTISEMENT

‘ಅರ್ಜಿದಾರರು ಒಟ್ಟಿಗೆ ಬದುಕುತ್ತಿದ್ದು, ಅದಕ್ಕೆ ಅನುಮೋದನೆ ನೀಡಬೇಕು ಎಂದು ಅವರು ಈ ಅರ್ಜಿ ಮೂಲಕ ಕೋರಿದ್ದಾರೆ. ಅವರು ಒಟ್ಟಿಗೆ ಇರುವುದನ್ನು ಸಾಮಾಜಿಕವಾಗಿ ಹಾಗೂ ನೈತಿಕವಾಗಿ ಒಪ್ಪಲಾಗದು. ಅವರಿಗೆ ರಕ್ಷಣೆ ನೀಡುವಂತೆ ಸೂಚಿಸಿ ಆದೇಶ ಹೊರಡಿಸಲು ಸಾಧ್ಯವಿಲ್ಲ’ ಎಂದು ಹೇಳಿದ ನ್ಯಾಯಮೂರ್ತಿ ಮದಾನ್‌,ಅರ್ಜಿಯನ್ನು ವಜಾಗೊಳಿಸಿದರು.

ಅರ್ಜಿದಾರರ ಪರ ವಕೀಲ ಜೆ.ಎಸ್‌.ಠಾಕೂರ್‌,‘ ಗುಲ್ಜಾಕುಮಾರಿ ಹಾಗೂ ಗುರ್ವಿಂದರ್ ಸಿಂಗ್‌ ತರ್ನ್ ತರನ್ ಜಿಲ್ಲೆಯಲ್ಲಿ ಒಟ್ಟಿಗೆ ಬದುಕುತ್ತಿದ್ದಾರೆ. ಕುಮಾರಿ ಅವರ ಪಾಲಕರು ಲೂಧಿಯಾನದಲ್ಲಿ ಇರುತ್ತಾರೆ. ಇವರಿಬ್ಬರ ನಡುವಿನ ಸಂಬಂಧಕ್ಕೆ ಕುಮಾರಿ ಪಾಲಕರ ಸಹಮತ ಇಲ್ಲ’ ಎಂದು ಹೈಕೋರ್ಟ್‌ ಗಮನಕ್ಕೆ ತಂದರು.

‘ಕುಮಾರಿಯ ವಯಸ್ಸು ಹಾಗೂ ಇತರ ವೈಯಕ್ತಿಕ ವಿವರಗಳಿಗೆ ಸಂಬಂಧಿಸಿದ ದಾಖಲೆಗಳು ಆಕೆಯ ಕುಟುಂಬದ ಬಳಿ ಇರುವ ಕಾರಣ, ಈ ಜೋಡಿ ಮದುವೆಯಾಗಲು ಸಾಧ್ಯವಾಗಿಲ್ಲ’ ಎಂದೂ ಠಾಕೂರ್‌ ವಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.