ADVERTISEMENT

ಕೋರ್ಟ್‌ ಕಲಾಪ ನೇರಪ್ರಸಾರ: ಸಿಜೆಐ ನಿರ್ಧಾರ ಕೈಗೊಳ್ಳಲಿ ಎಂದ ಸುಪ್ರೀಂ

ಪಿಟಿಐ
Published 4 ಫೆಬ್ರುವರಿ 2020, 16:14 IST
Last Updated 4 ಫೆಬ್ರುವರಿ 2020, 16:14 IST
   

ನವದೆಹಲಿ: ಸಾಂವಿಧಾನಿಕ ಹಾಗೂ ರಾಷ್ಡ್ರೀಯ ಮಹತ್ವದ ವಿಷಯಗಳ ಕುರಿತು ವಿಚಾರಣೆ ನಡೆಸುವ ಕೋರ್ಟ್‌ ಕಲಾಪಗಳ ನೇರ ಪ್ರಸಾರಕ್ಕೆ ಸಂಬಂಧಿಸಿದಂತೆ ಮುಖ್ಯನ್ಯಾಯಮೂರ್ತಿಗಳೇ ತೀರ್ಮಾನ ಕೈಗೊಳ್ಳುವರು ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಹೇಳಿದೆ.

ಕಲಾಪಗಳ ನೇರ ಪ್ರಸಾರ ಮಾಡುವುದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ 2018ರಲ್ಲಿ ತೀರ್ಪು ನೀಡಿದ್ದು, ಇದು ಇನ್ನೂ ಅನುಷ್ಠಾನಗೊಂಡಿಲ್ಲ.

’ಇದು ಆಡಳಿತಾತ್ಮಕ ವಿಷಯ. ಹೀಗಾಗಿ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳೇ ನಿರ್ಧಾರ ಕೈಗೊಂಡರೆ ಸಮರ್ಪಕವಾಗಿರುವುದು‘ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ಮೂವರು ನ್ಯಾಯಾಧೀಶರನ್ನು ಒಳಗೊಂಡ ಪೀಠ, ಈ ಸಂಬಂಧ ಯಾವುದೇ ಆದೇಶ ನೀಡಲು ನಿರಾಕರಿಸಿತು.

ADVERTISEMENT

‘ಇಂಥದೇ ಕಾನೂನು ರಚನೆ ಮಾಡಿ ಎಂದು ನಾವು ಸಂಸತ್ತಿಗೆ ಸೂಚನೆ ನೀಡಲು ಸಾಧ್ಯವೇ‘ ಎಂದು ಪ್ರಶ್ನಿಸಿದ ನ್ಯಾಯಪೀಠ, ‘ಅದೇ ರೀತಿ ಆಡಳಿತಾತ್ಮಕ ಅಂಶಗಳನ್ನು ಒಳಗೊಂಡಿರುವ ಈ ವಿಷಯವನ್ನು ಸಿಜೆಐ ಪರಿಶೀಲಿಸುವರು‘ ಎಂದು ಅಭಿಪ್ರಾಯಪಟ್ಟಿತು.

ಇದಕ್ಕೂ ಮುನ್ನ, ಸುಪ್ರೀಂಕೋರ್ಟ್‌ನ ಪ್ರಧಾನ ಕಾರ್ಯದರ್ಶಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಮಾಧವಿ ದಿವಾನ್‌, ’2018ರಲ್ಲಿ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಪ್ರಕ್ರಿಯೆ ಆರಂಭಗೊಂಡಿದೆ‘ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

‘ಕಲಾಪಗಳ ನೇರ ಪ್ರಸಾರಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಅಳವಡಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ‘ ಎಂದು ಸಾಲಿಟರ್‌ ಜನರಲ್‌ ಕೆ.ಕೆ.ವೇಣುಗೋಪಾಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.