ADVERTISEMENT

ಉಕ್ರೇನ್ ಗಡಿ ದಾಟುತ್ತಿದ್ದ ಭಾರತೀಯರನ್ನು ಒದೆಯುತ್ತಿದ್ದರು: ಯುಪಿ ವಿದ್ಯಾರ್ಥಿನಿ

ಪಿಟಿಐ
Published 2 ಮಾರ್ಚ್ 2022, 16:22 IST
Last Updated 2 ಮಾರ್ಚ್ 2022, 16:22 IST
ರಾಯಿಟರ್ಸ್ ಚಿತ್ರ
ರಾಯಿಟರ್ಸ್ ಚಿತ್ರ   

ನವದೆಹಲಿ: ಉಕ್ರೇನ್‌ನ ಸ್ಥಳೀಯ ಜನ ನಮಗೆ ನೆರವು ನೀಡುತ್ತಿದ್ದರು. ಆದರೆ, ಉಕ್ರೇನ್ ಗಡಿ ದಾಟಲು ಯತ್ನಿಸುವ ಭಾರತೀಯರನ್ನು ಗಡಿ ಭದ್ರತಾ ಸಿಬ್ಬಂದಿ ಕಾಲಿನಿಂದ ಒದ್ದು, ದೇಶದೊಳಗೆ ಎಳೆದೊಯ್ಯುತ್ತಿದ್ದರು ಎಂದು ಅಲ್ಲಿಂದ ಹಿಂದಿರುಗಿದ ಉತ್ತರ ಪ್ರದೇಶದ ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ.

ಉಕ್ರೇನ್‌ನ ವಿನ್ನಿಟ್ಸಿಯಾದಲ್ಲಿ ಎಂಬಿಬಿಎಸ್ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿರುವ ಆಶಿಕಾ ಮಂಗಳವಾರ ರಾತ್ರಿ 11ರ ಸುಮಾರಿಗೆ ದೆಹಲಿಗೆ ಬಂದಿಳಿದಿದ್ದರು. ಬುಧವಾರ ಬೆಳಿಗ್ಗೆ ಅವರು ಉತ್ತರ ಪ್ರದೇಶದ ಶಹಜಹಾನ್‌ಪುರಕ್ಕೆ ಆಗಮಿಸಿದರು.

‘ಅಲ್ಲಿನ ಪರಿಸ್ಥಿತಿ ಅತ್ಯಂತ ಕಠಿಣವಾಗಿದ್ದು, ಭಾರತಕ್ಕೆ ಹಿಂದಿರುಗುವ ಎಲ್ಲ ಆಶಯಗಳನ್ನು ಕೈಬಿಟ್ಟಿದ್ದೆವು. ಪರಸ್ಪರ ಸಂತೈಸುತ್ತಾ ನೋವು ತೋಡಿಕೊಳ್ಳುತ್ತಿದ್ದೆವು’ ಎಂದು ಅಶಿಕಾ ಪಿಟಿಐಗೆ ತಿಳಿಸಿದ್ದಾರೆ.

ADVERTISEMENT

ಯುದ್ಧ ಪೀಡಿತ ಉಕ್ರೇನ್‌ನಿಂದ ಸಾವಿರಾರು ಕಿ.ಮೀ ದೂರ ಬಂದಿದ್ದರೂ ಸಹ ಆ ಭಯಾನಕ ದೃಶ್ಯಗಳು ಈಗಲೂ ನನ್ನನ್ನು ಕಾಡುತ್ತವೆ ಎಂದು ಆಶಿಕಾ ಹೇಳಿದ್ದಾರೆ.

ಈಗಲೂ ದೊಡ್ಡ ಸೈರನ್ ಶಬ್ಧ ಕೇಳಿದರೆ ಆಶಿಕಾ ಬೆಚ್ಚಿ ಬೀಳುತ್ತಾಳೆ ಎಂದು ತಂದೆ ಅಮೀರ್ ಸಿಂಗ್ ಹೇಳಿದ್ದಾರೆ.

ಉಕ್ರೇನ್‌ನಿಂದ ತಪ್ಪಿಸಿಕೊಂಡು ಹೊರಬಂದ ರೋಚಕ ಕ್ಷಣಗಳ ಬಗ್ಗೆ ಮಾತನಾಡಿದ ಆಶಿಕಾ,‘ಫೆಬ್ರುವರಿ 26ರಂದು 50 ವಿದ್ಯಾರ್ಥಿಗಳ ಜೊತೆ ವಿನ್ನಿಟ್ಸಿಯಾದಲ್ಲಿ ಬಸ್ ಹತ್ತಿ 10 ಗಂಟೆ ಪ್ರಯಾಣ ಬೆಳೆಸಿ ಚೆರನಿಸ್ಟಿಗೆ ತೆರಳಿದೆವು. ಬಳಿಕ, 6 ಗಂಟೆ ನಡೆದು ರೊಮೇನಿಯಾ ಗಡಿ ತಲುಪಿದೆವು ಎಂದು ಆಶಿಕಾ ಹೇಳಿದರು.

‘ಗಡಿ ದಾಟುತ್ತಿದ್ದ ಕೆಲವರನ್ನು ಉಕ್ರೇನ್ ಸೇನೆ ಒಳಗೆ ಎಳೆದು ಹಾಕಿತ್ತು. ಕೆಲವರು ವಿದ್ಯಾರ್ಥಿಗಳನ್ನು ತಳ್ಳಿದರು. ಆ ಸಂದರ್ಭ ಒಬ್ಬ ಹುಡುಗಿ ಗಾಯಗೊಂಡಳು. ರೊಮೇನಿಯಾ ಸೇನೆಯೂ ಗಾಳಿಯಲ್ಲಿ ಗುಂಡು ಹಾರಿಸಿತ್ತು’ ಎಂದು ಅವರು ಹೇಳಿದರು.

‘ಅಷ್ಟೇ ಅಲ್ಲ, ಕೆಳಗೆ ಬಿದ್ದ ಕೆಲ ಭಾರತದ ವಿದ್ಯಾರ್ಥಿಗಳನ್ನು ಉಕ್ರೇನ್ ಸೈನಿಕರು ಒದ್ದರು. ಆದರೆ, ರೊಮೇನಿಯಾಗೆ ತಲುಪಿದ ಬಳಿಕ ಊಟ, ನೀರು, ಬೆಡ್‌ಶೀಟ್ ಕೊಟ್ಟು ಅಲ್ಲಿನ ಅಧಿಕಾರಿಗಳು ಸಹಾಯ ಮಾಡಿದರು’ ಎಂದು ವಿದ್ಯಾರ್ಥಿನಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.