ADVERTISEMENT

ನೇತಾರರ ಗುಳೆ ಚುರುಕು

ಚುನಾವಣೆ ಘೋಷಣೆ ಬೆನ್ನಲ್ಲೇ ವಿವಿಧ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2019, 20:22 IST
Last Updated 12 ಮಾರ್ಚ್ 2019, 20:22 IST
ಫಡಣವೀಸ್‌ ಜತೆಗೆ ಸುಜಯ್‌
ಫಡಣವೀಸ್‌ ಜತೆಗೆ ಸುಜಯ್‌   

ಮುಂಬೈ/ ಅಹಮದಾಬಾದ್‌: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ರಾಜಕೀಯ ಮುಖಂಡರು ಒಂದು ಪಕ್ಷದಿಂದ ತಮಗೆ ಅನುಕೂಲಕರವಾದ ಮತ್ತೊಂದು ಪಕ್ಷದತ್ತ ವಲಸೆ ಆರಂಭಿಸಿದ್ದಾರೆ.

ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ರಾಧಾಕೃಷ್ಣ ವಿಖೆ ಪಾಟೀಲ್‌ ಅವರ ಮಗ ಡಾ. ಸುಜಯ್‌ ವಿಖೆ ಪಾಟೀಲ್‌ ಅವರು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಸಮ್ಮುಖದಲ್ಲಿ ಮಂಗಳವಾರ ಬಿಜೆಪಿಗೆ ಸೇರಿದ್ದಾರೆ. ಅವರು ಅಹಮದ್‌ನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಸುಜಯ್‌ ಅವರ ನಿರ್ಧಾರದಿಂದ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ಗೆ ಭಾರಿ ಹಿನ್ನಡೆಯಾಗಬಹುದು ಎಂದು ವಿಶ್ಲೇಷಿಸಲಾಗಿದೆ.

ಸುಜಯ್‌ ಅವರ ಅಜ್ಜ ಬಾಳಾಸಾಹೇಬ್‌ ವಿಖೆ ಪಾಟೀಲ್‌ ಅವರು ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸಂಪುಟದಲ್ಲಿ ಸಚಿವರಾಗಿದ್ದರು. ಕಳೆದ ಎರಡು ತಿಂಗಳಿನಿಂದ ಸುಜಯ್‌ ಜತೆ ಬಿಜೆಪಿ ಮುಖಂಡರು ಸಂಪರ್ಕದಲ್ಲಿದ್ದರು. ಬಿಜೆಪಿ ಸೇರುವ ನಿರ್ಧಾರದಿಂದ ತಮ್ಮ ತಂದೆಗೆ ಭಾರಿ ಬೇಸರವಾಗಿದೆ ಎಂದು ಸುಜಯ್‌ ಹೇಳಿದ್ದಾರೆ.

ADVERTISEMENT

ಅಹಮದ್‌ನಗರ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿದ್ದೇ ಸುಜಯ್‌ ಅವರು ಬಿಜೆಪಿ ಸೇರಲು ಕಾರಣ ಎನ್ನಲಾಗಿದೆ. ಈ ಕ್ಷೇತ್ರದಲ್ಲಿ ಎನ್‌ಸಿಪಿ ಪ್ರಬಲವಾಗಿದೆ. ಹಾಗಾಗಿ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಎನ್‌ಸಿಪಿ ಒ‍ಪ್ಪಲಿಲ್ಲ. ಆದರೆ, ಸಾಕಷ್ಟು ಸಮಾಲೋಚನೆಯ ಬಳಿಕ ಎನ್‌ಸಿಪಿ ಟಿಕೆಟ್‌ನಲ್ಲಿ ಸ್ಪರ್ಧಿಸುವಂತೆ ಸುಜಯ್‌ ಅವರಿಗೆ ಸೂಚಿಸಲಾಗಿತ್ತು. ಅದನ್ನು ಅವರು ಒಪ್ಪಿಲ್ಲ ಎಂದು ಮೂಲಗಳು ಹೇಳಿವೆ.

ಸುಜಯ್‌ ಅವರಿಗೆ ಬಿಜೆಪಿಯಿಂದ ಈ ಕ್ಷೇತ್ರದ ಟಿಕೆಟ್‌ ಸಿಕ್ಕರೆ, ಈಗ ಈ ಕ್ಷೇತ್ರ ಪ್ರತಿನಿಧಿಸುತ್ತಿರುವ ದಿಲೀಪ್ ಗಾಂಧಿ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ. ಅವರು ಈ ಕ್ಷೇತ್ರದಿಂದ ಮೂರು ಬಾರಿ ಗೆದ್ದಿದ್ದಾರೆ. ಈಗ ಅವರು ಕೇಂದ್ರದ ಸಚಿವ ಕೂಡ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಬಲ:ಪಶ್ಚಿಮ ಬಂಗಾಳದಲ್ಲಿ ನೆಲೆ ಗಟ್ಟಿಗೊಳಿಸಬೇಕು ಎಂದು ಭಾರಿ ಯತ್ನ ನಡೆಸುತ್ತಿರುವ ಬಿಜೆಪಿಯತ್ತ ವಿವಿಧ ಪಕ್ಷಗಳ ಮುಖಂಡರ ವಲಸೆ ಮುಂದುವರಿದಿದೆ. ಕಾಂಗ್ರೆಸ್‌ ಶಾಸಕ ದುಲಾಲ್‌ ಚಂದ್ರ ಬರ್‌, ಸಿಪಿಎಂ ಶಾಸಕ ಖಗೆನ್‌ ಮುರ್ಮು, ತೃಣಮೂಲ ಕಾಂಗ್ರೆಸ್‌ನ ಉಚ್ಚಾಟಿತ ಸಂಸದ ಅನುಪಮ್‌ ಹಜ್ರಾ ಅವರು ದೆಹಲಿಯಲ್ಲಿ ಮಂಗಳವಾರ ಬಿಜೆಪಿ ಸೇರಿದ್ದಾರೆ.

ತೃಣಮೂಲ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿರುವ ಮುಕುಲ್‌ ರಾಯ್‌ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅವರು ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದಿದ್ದಾರೆ. ಪ‍ಶ್ಚಿಮ ಬಂಗಾಳದಲ್ಲಿ ಮಮತಾ ವಿರೋಧಿ ಅಲೆ ಎದ್ದಿದೆ. ತೃಣಮೂಲ ಕಾಂಗ್ರೆಸ್‌ನ ಇನ್ನಷ್ಟು ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ಗೆ ಹಾರ್ದಿಕ್‌

ಪಾಟಿದಾರ್‌ ಸಮುದಾಯದ ಮೀಸಲಾತಿ ಚಳವಳಿಯ ನಾಯಕ ಹಾರ್ದಿಕ್‌ ಪಟೇಲ್‌ ಅವರು ಕಾಂಗ್ರೆಸ್‌ಗೆ ಮಂಗಳವಾರ ಸೇರ್ಪಡೆಯಾಗಿದ್ದಾರೆ. ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಉಪಸ್ಥಿತಿಯಲ್ಲಿ ಹಾರ್ದಿಕ್‌ ಅವರು ಪಕ್ಷಕ್ಕೆ ಸೇರ್ಪಡೆಯಾದರು.

ಲೋಕಸಭಾ ಚುನಾವಣೆಗೆ ಮುನ್ನವೇ ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿರುವುದನ್ನು ಹಾರ್ದಿಕ್‌ ಅವರು ಸಮರ್ಥಿಸಿಕೊಂಡಿದ್ದಾರೆ. ರಾಜಕೀಯ ಸೇರುವುದರಿಂದ ಗುಜರಾತ್‌ನ ಆರು ಕೋಟಿ ಜನರ ಸೇವೆ ಮಾಡಲು ಸಾಧ್ಯ ಎಂದಿದ್ದಾರೆ. ಗಾಂಧಿನಗರದ ಅಡಲಜಿ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ತಮ್ಮ ನಿರ್ಧಾರ ಸರಿಯೇ ಎಂದು ಸಮಾವೇಶದಲ್ಲಿ ಸೇರಿದ್ದವರನ್ನು ಹಾರ್ದಿಕ್‌ ಪ್ರಶ್ನಿಸಿದರು. ‘ಹೌದು, ಹೌದು’ ಎಂದು ಜನರು ಮಾರುತ್ತರ ಕೊಟ್ಟರು.

‘ದ್ವೇಷ ಹರಡುವ ಮೋದಿ’

ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹುದ್ದೆಗೇರಿ ಎರಡು ತಿಂಗಳ ಬಳಿಕ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜಕೀಯ ಸಮಾವೇಶದಲ್ಲಿ ಮಂಗಳವಾರ ಮೊದಲ ಭಾಷಣ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು. ಕೊಟ್ಟ ಯಾವಭರವಸೆಯನ್ನೂಮೋದಿ ಅವರು ಈಡೇರಿಸಿಲ್ಲ, ಅವರ ಆಳ್ವಿಕೆಯಲ್ಲಿ ದ್ವೇಷ ಹರಡುವ ಕೆಲಸವಾಗುತ್ತಿದೆ ಎಂದು ಪ್ರಿಯಾಂಕಾ ವಾಗ್ದಾಳಿ ನಡೆಸಿದರು.

ದೇಶದಲ್ಲಿ ಏನಾಗುತ್ತಿದೆಯೋ ಅದರ ಬಗ್ಗೆ ತಮಗೆ ಭಾರಿ ಬೇಸರವಿದೆ ಎಂದ ಅವರು ಉದ್ಯೋಗಗಳು ಎಲ್ಲಿವೆ ಎಂದು ಪ್ರಶ್ನಿಸಿದರು. ಚುನಾವಣೆ ಸಂದರ್ಭದಲ್ಲಿ ಜನರು ಹೆಚ್ಚು ಜಾಗೃತರಾಗಿರಬೇಕು, ತಮ್ಮ ಮತಗಳನ್ನು ಅಸ್ತ್ರದಂತೆ ಬಳಸಬೇಕು, ಸರಿಯಾದ ವಿಚಾರಗಳನ್ನು ಎತ್ತಬೇಕು ಮತ್ತು ಬುದ್ಧಿವಂತಿಕೆಯಿಂದ ನಿರ್ಧಾರ ಕೈಗೊಳ್ಳಬೇಕು ಎಂದರು.

ರಾಜ್ಯದಲ್ಲೂ ಜಿಗಿದಾಟ...

ಬೆಂಗಳೂರು: ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿರುವ ಬೆನ್ನಲ್ಲೇ, ಪಕ್ಷದಿಂದ ಪಕ್ಷಕ್ಕೆ ಜಿಗಿಯುವವರು ಆಟ ಶುರು ಮಾಡಿದ್ದಾರೆ.

ಅರಕಲಗೂಡು ಕ್ಷೇತ್ರದ ಮಾಜಿ ಶಾಸಕ ಎ.ಮಂಜು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವ ತವಕದಲ್ಲಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಬಿಜೆಪಿ ಬೇರೆ ಪಕ್ಷದವರಿಗೆ ಮಣೆ ಹಾಕಲು ಚಿಂತನೆ ನಡೆಸಿದೆ. ಹೀಗಾಗಿ, ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಸೋದರ ವೆಂಕಟೇಶ ಪ್ರಸಾದ್‌ ಅವರನ್ನು ಕರೆತರುವ ಚರ್ಚೆಯನ್ನು ಆ ಪಕ್ಷದ ನಾಯಕರು ನಡೆಸಿದ್ದಾರೆ.ಚಿಕ್ಕೋಡಿ ಕ್ಷೇತ್ರದಲ್ಲಿ ಗೋಕಾಕ ಕ್ಷೇತ್ರದ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಕಣಕ್ಕೆ ಇಳಿಸುವ ಇರಾದೆ ಬಿಜೆಪಿ ನಾಯಕರದ್ದಾಗಿದೆ. ಆದರೆ, ಜಾರಕಿಹೊಳಿ ತೀರ್ಮಾನ ತೆಗೆದುಕೊಂಡಿಲ್ಲ.

***

ನಿಮ್ಮ ಮತವೇ ಒಂದು ಅಸ್ತ್ರ. ಈ ಅಸ್ತ್ರದಿಂದ ನೀವು ಯಾರಿಗೂ ಹಾನಿ ಮಾಡುವುದಿಲ್ಲ. ಆದರೆ, ಈ ಅಸ್ತ್ರವು ನಿಮ್ಮನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ
-ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್ ನಾಯಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.