ADVERTISEMENT

ಜನತಂತ್ರದ ಹಬ್ಬಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 19 ಮೇ 2019, 19:36 IST
Last Updated 19 ಮೇ 2019, 19:36 IST
   

ಕೋಲ್ಕತ್ತ: ಲೋಕಸಭಾ ಚುನಾವಣೆಯ ಏಳು ಹಂತಗಳ ಮತದಾನ ಪ್ರಕ್ರಿಯೆ ಭಾನುವಾರ ಪೂರ್ಣಗೊಂಡಿದ್ದು, ಗುರುವಾರ
(ಮೇ 23) ಮತ ಎಣಿಕೆ ನಡೆಯಲಿದೆ. ಈ ಬಾರಿ ಎಲ್ಲ ಹಂತಗಳಲ್ಲೂ ಸರಾಸರಿ ಶೇ 60ಕ್ಕೂ ಹೆಚ್ಚು ಮತದಾನ ನಡೆದಿದೆ.

ಪಶ್ಚಿಮ ಬಂಗಾಳದಲ್ಲಿ ಪ್ರತಿ ಹಂತದಲ್ಲೂ ಸಣ್ಣ ಪುಟ್ಟ ಗಲಭೆಗಳು ನಡೆದಿರುವುದನ್ನು ಬಿಟ್ಟರೆ, ದೇಶದಾದ್ಯಂತ ಮತದಾನ ಶಾಂತಿಯುತ
ವಾಗಿ ನಡೆದಿದೆ. ಅತಿ ಹೆಚ್ಚು ಲೋಕಸಭಾ ಸದಸ್ಯರನ್ನು ಹೊಂದಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳಕ್ಕೆ (42 ಸ್ಥಾನಗಳು) ಮೂರನೇ ಸ್ಥಾನವಿದೆ. ಈ ರಾಜ್ಯದಲ್ಲಿ ಈ ಬಾರಿ ಏಳು ಹಂತಗಳಲ್ಲೂ ಮತದಾನ ನಡೆದಿತ್ತು.

ಭಾನುವಾರ ನಡೆದ ಕೊನೆಯ ಹಂತದ ಮತದಾನದ ವೇಳೆ ನಾಡ ಬಾಂಬ್‌ಗಳು ಸಿಡಿದಿವೆ. ತಮ್ಮ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿಯ ಅಭ್ಯರ್ಥಿಗಳು ಆರೋಪಿಸಿದ್ದಾರೆ. ‘ಟಿಎಂಸಿಯ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ
ನಡೆಸಿ, ಶಾಲಾ ಕಟ್ಟಡದೊಳಗೆ ಕೂಡಿ ಹಾಕಿದ್ದರು’ ಎಂದು ಕೋಲ್ಕತ್ತ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಹುಲ್‌ ಸಿನ್ಹಾ ಆರೋಪಿಸಿದ್ದಾರೆ.

ADVERTISEMENT

‘ನನ್ನ ಕಾರಿನ ಮೇಲೆ ಟಿಎಂಸಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ’ ಎಂದು ಜಾಧವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನುಪಂ ಹಾಜರಾ ಆರೋಪಿಸಿದ್ದಾರೆ.

ದಾಳಿಯ ಭೀತಿ

‘ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದಿದ್ದರೂ ಟಿಎಂಸಿಯವರು ಒಂದು ವರ್ಗದ ಮತದಾರರ ಮೇಲೆ ದಾಳಿ ನಡೆಸುವ ಸಾಧ್ಯತೆ ಇದ್ದು, ನೀತಿ ಸಂಹಿತೆ ಕೊನೆಗೊಳ್ಳುವವರೆಗೂ ಪಶ್ಚಿಮ ಬಂಗಾಳದಲ್ಲಿ ಕೇಂದ್ರದ ಸಶಸ್ತ್ರ ಪಡೆಗಳನ್ನು ಉಳಿಸುವಂತೆ ಆದೇಶ ನೀಡಬೇಕು’ ಎಂದು ಬಿಜೆಪಿಯು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.

ಬಿಜೆಪಿ ಪರ ಕೆಲಸ

‘ಪಶ್ಚಿಮ ಬಂಗಾಳದ ಗ್ರಾಮೀಣ ಭಾಗಗಳ ಮತದಾರರನ್ನು ಕೇಂದ್ರದ ಭದ್ರತಾ ಪಡೆಗಳವರು ಬೆದರಿಸಿದ್ದಾರೆ. ಬಿಜೆಪಿಗೆ ಮತಚಲಾಯಿಸುವಂತೆ ಒತ್ತಡ ಹೇರಿದ್ದಾರೆ. ಭದ್ರತಾ ಪಡೆಯವರು ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ’ ಎಂದು ಟಿಎಂಸಿ ವಕ್ತಾರ ಡರೆಕ್‌ ಒ’ ಬ್ರಿಯಾನ್‌ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.