ADVERTISEMENT

ಒಡಿಶಾದ 15 ಮತಗಟ್ಟೆಗಳಲ್ಲಿ ಶೂನ್ಯ , ತ್ರಿಪುರದಲ್ಲಿ ಗರಿಷ್ಟ ಶೇ 81ರಷ್ಟು ಮತದಾನ

ಲೋಕಸಭಾ ಚುನಾವಣೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 14:03 IST
Last Updated 11 ಏಪ್ರಿಲ್ 2019, 14:03 IST
ಮತದಾನಕ್ಕೆ ಸಾಲುಗಟ್ಟಿರುವ ಜನರು
ಮತದಾನಕ್ಕೆ ಸಾಲುಗಟ್ಟಿರುವ ಜನರು   

ಬೆಂಗಳೂರು: ಲೋಕಸಭೆಯ ಮೊದಲ ಹಂತದ ಚುನಾವಣೆ ಗುರುವಾರ ನಡೆದಿದ್ದು, ನಕ್ಸರ ಭಯದಿಂದಾಗಿ ಒಡಿಶಾದ 15 ಮತಗಟ್ಟೆಗಳಲ್ಲಿ ಶೂನ್ಯ ಹಾಗೂ ತ್ರಿಪುರದಲ್ಲಿ ಅತಿಹೆಚ್ಚು ಶೇ 81ರಷ್ಟು ಮತದಾನವಾಗಿದೆ.

18 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣೆ ನಡೆದಿದೆ. ಇದರ ಜೊತೆಗೆ ಆಂಧ್ರಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ, ಸಿಕ್ಕಿಂನಲ್ಲಿ ವಿಧಾನಸಭಾ ಚುನಾವಣೆಗಳಿಗೂ ಮತದಾನ ನಡೆಯಿತು.

ಸಂಜೆ 5 ಗಂಟೆವರೆಗೆ ಉತ್ತರಪ್ರದೇಶದಲ್ಲಿಶೇ 59.77, ಬಿಹಾರದಲ್ಲಿ ಶೇ 50.26ರಷ್ಟು ಮತದಾನವಾಗಿದೆ. ಮೇಘಾಲಯದಲ್ಲಿ ಶೇ 62, ಮಿಜೋರಾಂನಲ್ಲಿ ಶೇ 60.82, ನಾಗಾಲೆಂಡ್‌ನಲ್ಲಿ ಶೇ 73, ಮಣಿಪುರದಲ್ಲಿ ಶೇ 78.20, ಸಿಕ್ಕಿಂನಲ್ಲಿ ಶೇ 75, ಅಸ್ಸಾಂನಲ್ಲಿ ಶೇ 67.4 ಹಾಗೂ ಅರುಣಾಚಲ ಪ್ರದೇಶದಲ್ಲಿ ಶೇ 58.26, ತೆಲಂಗಾಣದಲ್ಲಿ ಶೇ 60.57ರಷ್ಟು ಮತದಾನವಾಗಿದೆ.

ADVERTISEMENT

ಮಹಾರಾಷ್ಟ್ರದ ಗಾಡ್‌ಚಿರೊಲಿ ಜಿಲ್ಲೆಯ ಇಟಪಳ್ಳಿಯಲ್ಲಿ ನಕ್ಸಲರು ನಡೆಸಿದ ಎಲ್‌ಇಡಿಸ್ಪೋಟ ಹಾಗು ಗುಂಡಿನ ದಾಳಿಗೆ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರನ್ನು ನಾಗಪುರದಲ್ಲಿನ ಆಸ್ಪತ್ರಗೆ ದಾಖಲಿಸಲಾಗಿದೆ. ಮತದಾನ ಪೂರ್ಣಗೊಳಿಸಿಕೊಂಡು ವಾಪಸ್‌ ಬರುವ ವೇಳೆ ಈ ಘಟನೆ ನಡೆದಿದೆ.

ಆಂಧ್ರಪ್ರದೇಶದಲ್ಲಿ ಮತದಾನದ ವೇಳೆ 15 ಕಡೆಗಳಲ್ಲಿ ಗಲಭೆ ನಡೆದಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವಿನ ಘರ್ಷಣೆಗೆ ಇಬ್ಬರು ಬಲಿಯಾಗಿದ್ದಾರೆ. ಅನಂತಪುರಂ, ಕಡಪ, ಗೋದಾವರಿ, ವಿಶಾಖಪಟ್ಟಣ ಜಿಲ್ಲೆಗಳ ವ್ಯಾಪ್ತಿಯಲ್ಲಿ ತೆಲುಗುದೇಶಂ, ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ನಟ ಪವನ್‌ ಕಲ್ಯಾಣ್‌ ನೇತೃತ್ವದ ಜನಾಸೇನ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿರುವುದಾಗಿ ವರದಿಯಾಗಿದೆ.

ಅನಂತಪುರ ಜಿಲ್ಲೆಯ ತಾಡಪತ್ರಿಯಲ್ಲಿ ಸಂಭವಿಸಿದ ಘರ್ಷಣೆಯಲ್ಲಿವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಕಡಪದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಟಿಡಿಪಿ ಕಾರ್ಯಕರ್ತರನಡುವೆ ಗಲಾಟೆ ನಡೆದಿದ್ದು ಘಟನೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

ಉತ್ತರ ಪ್ರದೇಶದ ಶಾಮ್ಲಿ ಮತಗಟ್ಟೆಯಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಬಿಎಸ್‌ಎಫ್‌ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದೆ. ‘ಮತಚೀಟಿಹೊಂದಿರದ ಕೆಲವರು ಮತದಾನಕ್ಕೆ ಮುಂದಾಗಿದ್ದರಿಂದ ಗುಂಡು ಹಾರಿಸಿದೆ’ ಎಂದು ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.