ADVERTISEMENT

ದೇವರನಾಡಿನ ರಾಜಕಾರಣದ ಮುನ್ನೆಲೆಗೆ ಶಬರಿಮಲೆ

ಪರಿಸರ ನಾಶ, ನಿಲ್ಲದ ರಾಜಕೀಯ ಹತ್ಯೆಗಳು, ವಾಣಿಜ್ಯ ಬೆಳೆಗೆ ಹೊಡೆತ ಕೇರಳದಲ್ಲಿ ಲೋಕಸಭೆ ಚುನಾವಣಾ ಮುಖ್ಯ ವಿಚಾರಗಳು

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 19:15 IST
Last Updated 26 ಮಾರ್ಚ್ 2019, 19:15 IST
ಕುಮ್ಮನಂ ರಾಜಶೇಖರನ್‌
ಕುಮ್ಮನಂ ರಾಜಶೇಖರನ್‌   

ತಿರುವನಂತಪುರ: ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡುವುದೂ ಸೇರಿದಂತೆ, ಕೇರಳದಲ್ಲಿ ಈ ಬಾರಿ ಹಲವು ವಿಚಾರಗಳು ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಲಿವೆ.

ಪರಿಸರ ನಾಶ, ವಾಣಿಜ್ಯ ಬೆಳೆಗಳ ಬೆಲೆ ಕುಸಿತ ಮುಂತಾದ ಸ್ಥಳೀಯ ವಿಚಾರಗಳೂ ಚುನಾವಣೆಯ ಪ್ರಮುಖ ಅಸ್ತ್ರಗಳಾಗಲಿವೆ. ಇದರ ಜೊತೆಗೆ ಪಾಕಿಸ್ತಾನ ಗಡಿಯಲ್ಲಿ ನಡೆದ ವಾಯು ದಾಳಿ ಮತ್ತು ಕೇರಳದಲ್ಲಿ ನಡೆದ ರಾಜಕೀಯ ಹತ್ಯೆಗಳನ್ನೂ ಎಲ್ಲಾ ಪಕ್ಷಗಳು ರಾಜಕೀಯ ದಾಳಗಳಾಗಿ ಬಳಸುವುದು ಖಚಿತ.

ಬಿಜೆಪಿಯು ರಾಜ್ಯದಲ್ಲಿ ಈ ಬಾರಿ ಖಾತೆ ತೆರೆಯುವುದೇ ಎಂಬುದು ಕುತೂ ಹಲದ ವಿಚಾರವಾಗಿದೆ. ಶಬರಿಮಲೆ ದೇವಸ್ಥಾನದೊಳಗೆ 10ರಿಂದ 50 ವರ್ಷದೊಳಗಿನ ಸ್ತ್ರೀಯರಿಗೆ ಪ್ರವೇಶ ಕಲ್ಪಿಸುವ ವಿಚಾರದಲ್ಲಿ ಬಿಜೆಪಿ ತಳೆದಿರುವ ನಿಲುವು ಈ ನಿಟ್ಟಿನಲ್ಲಿ ನಿರ್ಣಾಯಕವಾಗಲಿದೆ. ‘ಶಬರಿಮಲೆ ವಿಚಾರದಲ್ಲಿ ನಾವು ತಳೆದಿರುವ ನಿಲುವನ್ನು ಹೆಚ್ಚಿನ ಹಿಂದೂಗಳು ಬೆಂಬಲಿಸಿದ್ದಾರೆ. ಈ ಬೆಂಬಲ ಮತಗಳಾಗಿ ಮಾರ್ಪಡುತ್ತವೆ’ ಎಂದು ಬಿಜೆಪಿ ಭಾವಿಸಿದೆ. ತಿರುವನಂತಪುರ, ಪಟ್ಟಣಂತಿಟ್ಟ, ತ್ರಿಶ್ಶೂರ್‌ ಹಾಗೂ ಪಾಲಕ್ಕಾಡ್‌ನಲ್ಲಿ ಹಿಂದೂ ಮತದಾರರ ಸಂಖ್ಯೆ ದೊಡ್ಡದಾಗಿದ್ದು, ಶಬರಿಮಲೆ ವಿಚಾರ ಇವರ ಮೇಲೆ ಪರಿಣಾಮ ಉಂಟುಮಾಡಿರುವ ಸಾಧ್ಯತೆ ಇದೆ.

ADVERTISEMENT

ಕಳೆದ ವರ್ಷ ಕೇರಳವು ಭೀಕರ ಪ್ರವಾಹಕ್ಕೆ ತುತ್ತಾಗಿ, 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಸುಮಾರು ₹ 30 ಸಾವಿರ ಕೋಟಿ ನಷ್ಟ ಉಂಟಾಗಿತ್ತು. ಈಗ ಕೇರಳದಲ್ಲಿ ಬೇಸಿಗೆಯ ಬಿಸಿ ತೀವ್ರವಾಗಿದ್ದು, ಅನೇಕ ಭಾಗಗಳಲ್ಲಿ ಬರದ ಛಾಯೆ ಇದೆ. ಆದ್ದರಿಂದ ಪರಿಸರ ರಕ್ಷಣೆಯ ವಿಚಾರ ಚುನಾವಣೆಯ ವಿಚಾರವಾಗುವ ಸಾಧ್ಯತೆ ದಟ್ಟವಾಗಿದೆ. ಕೇರಳದಲ್ಲಿ ಪ್ರಸಕ್ತ ಎಡ ಪ್ರಜಾಸತ್ತಾತ್ಮಕ ರಂಗದ (ಎಲ್‌ಡಿಎಫ್‌) ಸರ್ಕಾರವಿದೆ. ಪ್ರವಾಹದ ನಂತರದ ಪುನರ್ವಸತಿ ಯೋಜನೆಯಲ್ಲಿ ಆಗಿರುವ ಲೋಪಗಳನ್ನೇ ಅಸ್ತ್ರವಾಗಿಸಿಕೊಂಡು ವಿರೋಧಪಕ್ಷಗಳು ಸರ್ಕಾರದ ಮೇಲೆ ದಾಳಿ ನಡೆಸಬಹುದು.

ಕಾಸರಗೋಡು ಜಿಲ್ಲೆಯಲ್ಲಿ ಈಚೆಗೆ ನಡೆದ ಇಬ್ಬರು ಯುವ ಕಾಂಗ್ರೆಸ್‌ ಕಾರ್ಯಕರ್ತರ ಹತ್ಯೆಯೂ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ರಾಜಕೀಯ ಹತ್ಯೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್‌ ಸಿದ್ಧತೆ ಮಾಡಿಕೊಂಡಿದೆ. ಕೇರಳದಲ್ಲಿ ಎಲ್‌ಡಿಎಫ್‌ ಸರ್ಕಾರ ರಚನೆಯಾದ ಬಳಿಕ ಒಟ್ಟಾರೆ 20 ರಾಜಕೀಯ ಹತ್ಯೆಗಳಾಗಿವೆ. ಹತ್ಯೆಗೊಳಗಾದ ಕಾಸರಗೋಡಿನ ಯುವಕರ ಮನೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇತ್ತೀಚೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ರಾಜಕೀಯ ಹತ್ಯೆಗಳು ಚುನಾವಣೆಯಲ್ಲಿ ಮುಖ್ಯವಾಗಿ ಪ್ರಸ್ತಾಪವಾಗಲಿದೆ ಎಂಬುದರ ಮುನ್ಸೂಚನೆ ಎಂದೇ ಇದನ್ನು ಪರಿಗಣಿಸಲಾಗುತ್ತಿದೆ.

ನೋಟು ರದ್ದತಿಯು ಕೇರಳದ ರಿಯಲ್‌ ಎಸ್ಟೇಟ್‌ ವಹಿವಾಟಿಗೆ ದೊಡ್ಡ ಹೊಡೆತ ನೀಡಿದೆ. ಜನರೂ ಇದರಿಂದ ಸಂಕಷ್ಟ ಅನುಭವಿಸಿದ್ದರು. ಜಿಎಸ್‌ಟಿ ಜಾರಿಯಿಂದ ಕುಸಿದುಹೋದ ವಹಿವಾಟು ಇನ್ನೂ ಚೇತರಿಸಿಕೊಂಡಿಲ್ಲ ಎಂದು ಹೆಚ್ಚಿನ ವರ್ತಕರು ಹೇಳುತ್ತಿದ್ದಾರೆ. ಈ ವಿಚಾರಗಳು ಚುನಾವಣೆಯ ಮೇಲೆ ಪರಿಣಾಮ ಉಂಟುಮಾಡುವವೇ ಎಂಬುದನ್ನು ಕಾಯ್ದು ನೋಡಬೇಕು. ಕೃಷಿ ಉತ್ಪನ್ನಗಳ ಬೆಲೆ ಕುಸಿತ ಮತ್ತು ಬಿಜೆಪಿಯ ಹಿಂದುತ್ವ ಅಜೆಂಡಾಗಳನ್ನು ಮುಂದಿಟ್ಟುಕೊಂಡು ಎಡಪಕ್ಷಗಳು ಹಾಗೂ ಕಾಂಗ್ರೆಸ್‌, ಬಿಜೆಪಿಯನ್ನು ಕಟ್ಟಿಹಾಕುವ ಪ್ರಯತ್ನ ಮಾಡಬಹುದು.

‘ಕೇರಳದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಿಗೆ ತಮ್ಮದೇ ಆದ ಮತದಾರರಿದ್ದಾರೆ. ಯಾವುದೇ ಪಕ್ಷಕ್ಕೆ ಬದ್ಧರಾಗಿರದೆ, ನಿರುದ್ಯೋಗ, ಅಭಿವೃದ್ಧಿ, ಪರಿಸರ ಮುಂತಾದ ವಿಚಾರಗಳ ಆಧಾರದಲ್ಲಿ ಮತ ಚಲಾಯಿಸುವ ಸಣ್ಣ ಪ್ರಮಾಣದ ಮತದಾರರು ಈ ಚುನಾವಣೆಯಲ್ಲಿ ನಿರ್ಣಾಯಕರಾಗಲಿದ್ದಾರೆ. ಭಯೋತ್ಪಾದಕರ ದಾಳಿ ಹಾಗೂ ಬಿಜೆಪಿಯು ಅದಕ್ಕೆ ನೀಡಿರುವ ಪ್ರತಿಕ್ರಿಯೆಯ ವಿಚಾರ ಕೇರಳ ಚುನಾವಣೆಯ ಮೇಲೆ ದೊಡ್ಡ ಪರಿಣಾಮವನ್ನು ಉಂಟುಮಾಡಲಾರದು’ ಎಂದು ರಾಜಕೀಯ ವಿಶ್ಲೇಷಕ, ಹಿರಿಯ ಪತ್ರಕರ್ತ ಬಾಬು ಭಾಸ್ಕರ್‌ ಹೇಳುತ್ತಾರೆ.

ಖಾತೆ ತೆರೆಯುವ ತವಕ

ಕೇರಳದಲ್ಲಿ ಸಿಪಿಎಂ ನೇತೃತ್ವದ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್‌) ಮತ್ತು ಕಾಂಗ್ರೆಸ್‌ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗದ (ಯುಡಿಎಫ್‌) ನಡುವೆ ಈ ಬಾರಿಯೂ ನೇರ ಸ್ಪರ್ಧೆ ಇದೆ. ಎಡಪಕ್ಷಗಳು ಕಠಿಣ ಸವಾಲು ಎದುರಿಸಬೇಕಾದ ಸ್ಥಿತಿ ಇದೆ. ಯುಡಿಎಫ್‌ ಉತ್ತಮ ಸಾಧನೆ ದಾಖಲಿಸಬಹುದು ಎಂದು ಇತ್ತೀಚೆಗೆ ನಡೆದ ಕೆಲವು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಹಾಗಾಗಿಯೇ ಎಡರಂಗ ಪ್ರಬಲ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಲು ತೀರ್ಮಾನಿಸಿದೆ. ನಾಲ್ವರು ಶಾಸಕರು, ಜಿಲ್ಲಾ ಸಮಿತಿಯ ಇಬ್ಬರು ಕಾರ್ಯದರ್ಶಿಗಳು ಕಣಕ್ಕೆ ಇಳಿಯುವುದು ಬಹುತೇಕ ಖಚಿತವಾಗಿದೆ.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡುವ ವಿಚಾರದಲ್ಲಿ ಉಂಟಾದ ವಿವಾದ ಎಲ್‌ಡಿಎಫ್‌ಗೆ ಪ್ರತಿಕೂಲವಾಗಿ ಪರಿಣಮಿಸಬಹುದು; ಅದಲ್ಲದೆ, ಕಳೆದ ಕೆಲ ವರ್ಷಗಳಲ್ಲಿ ನಡೆದ ರಾಜಕೀಯ ಹಿಂಸಾಚಾರವೂ ಸಿಪಿಎಂ ಪಾಲಿಗೆ ಮುಳುವಾಗಬಹುದು ಎನ್ನಲಾಗಿದೆ.

ಶಬರಿಮಲೆ ವಿವಾದದಿಂದಾಗಿ ಕೇರಳದ ಸಾಂಪ್ರದಾಯಿಕ ನೇರ ಸ್ಪರ್ಧಾ ಕಣದ ಚಿತ್ರಣ ಬದಲಾಗಿದೆ. ಬಿಜೆಪಿ ಹೆಚ್ಚಿನ ಬಲ ಕ್ರೋಡೀಕರಿಸಿಕೊಂಡ ಕಾರಣ ಕೆಲವು ಕ್ಷೇತ್ರಗಳಲ್ಲಾದರೂ ತ್ರಿಕೋನ ಸ್ಪರ್ಧೆ ಉಂಟಾಗಹುದು. ಮಿಜೋರಾಂನ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್‌ ಅವರನ್ನು ತಿರುವನಂತಪುರ ಕ್ಷೇತ್ರದಿಂದ ಬಿಜೆಪಿ ಕಣಕ್ಕೆ ಇಳಿಸುವುದು ಖಚಿತ. ಈ ಕ್ಷೇತ್ರ ವ್ಯಾಪ್ತಿಯ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಕಳೆದ ಬಾರಿ ಕಾಂಗ್ರೆಸ್‌ನ ಶಶಿ ತರೂರ್‌ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ ಹಿರಿಯ ಮುಖಂಡ ಒ.ರಾಜಗೋಪಾಲ್‌ ಅವರು 15 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಈ ಬಾರಿ ಈ ಕ್ಷೇತ್ರದಲ್ಲಿ ಕಮಲ ಅರಳಿಸಲೇಬೇಕು ಎಂಬ ಜಿದ್ದು ಬಿಜೆಪಿಗೆ ಇದೆ. ಕಾಸರಗೋಡು ಮತ್ತು ಕಣ್ಣೂರು ಕ್ಷೇತ್ರಗಳ ಮೇಲೆಯೂ ಬಿಜೆಪಿ ಕಣ್ಣಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.