ADVERTISEMENT

‘ಅತಂತ್ರ ಜನಾದೇಶ ದೇಶಕ್ಕೆ ಅಪಾಯ’- ಪ್ರಧಾನಿ ನರೇಂದ್ರ ಮೋದಿ

ಪಿಟಿಐ
Published 13 ಫೆಬ್ರುವರಿ 2019, 20:30 IST
Last Updated 13 ಫೆಬ್ರುವರಿ 2019, 20:30 IST
ವಿಪಕ್ಷ ನಾಯಕರಿಗೆ ಧನ್ಯವಾದ ಸಲ್ಲಿಸಿದ ಮೋದಿ
ವಿಪಕ್ಷ ನಾಯಕರಿಗೆ ಧನ್ಯವಾದ ಸಲ್ಲಿಸಿದ ಮೋದಿ   

ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶ ದೊರೆಯದಿದ್ದರೆ ಜಾಗತಿಕವಾಗಿ ಭಾರತದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.

16ನೇ ಲೋಕಸಭೆಯ ಕೊನೆಯ ಅಧಿವೇಶನದಲ್ಲಿ ಬುಧವಾರ ಮಾತನಾಡಿದ ಅವರು, ಎನ್‌ಡಿಎ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದರು. ಅತಂತ್ರ ಜನಾದೇಶದ ಕಾರಣ ಬಹಳ ವರ್ಷ ಭಾರತಕ್ಕೆ ಜಾಗತಿಕ ಮನ್ನಣೆ ದೊರೆಯಲಿಲ್ಲ. ಬಹುಮತ ಪಡೆದ ಸರ್ಕಾರ ಅಸ್ತಿತ್ವದಲ್ಲಿದೆ ಎಂದು ಇಡೀ ವಿಶ್ವ ಭಾರತವನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.

ಕಾಂಗ್ರೆಸ್ಸೇತರ ಗೋತ್ರದ ಬಹುಮತದ ಸರ್ಕಾರವು ಕಪ್ಪುಹಣ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆ ಎಂದು ಬಣ್ಣಿಸಿದರು.

ADVERTISEMENT

ವಿಶ್ವದ ಆರನೇ ಬಲಾಢ್ಯ ಆರ್ಥಿಕ ಶಕ್ತಿಯಾದ ಭಾರತ ಆರ್ಥಿಕ ಚಟುವಟಿಕೆಗಳ ಕೇಂದ್ರವಾಗಿದೆ. ಜಾಗತಿಕ ಸಂಸ್ಥೆಗಳು ಭಾರತದ ಸಾಧನೆ ಬಗ್ಗೆ ಮಾತನಾಡುತ್ತಿವೆ ಎಂದರು.

ಸರ್ಕಾರದ ಸಾಧನೆಗೆ ವಿಪಕ್ಷಗಳ ಸಹಕಾರ ಸ್ಮರಿಸಿದರು. ರಫೇಲ್‌ ಬಗ್ಗೆ ಮಾತನಾಡಲು ಅವಕಾಶ ನೀಡಿದರೆ ಸಂಸತ್‌ನಲ್ಲಿ ಭೂಕಂಪವಾಗುತ್ತದೆ ಎಂದು ವ್ಯಕ್ತಿಯೊಬ್ಬರು ಹೇಳಿದ್ದರು. ಆದರೆ, ಸದನದಲ್ಲಿ ಕಾಗದದ ವಿಮಾನ ಹಾರಿದ್ದು ಬಿಟ್ಟರೆ ಭೂಕಂಪವಾಗಲೇ ಇಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಹೆಸರು ಪ್ರಸ್ತಾಪಿಸದೆ ಲೇವಡಿ ಮಾಡಿದರು. ಆಗ ರಾಹುಲ್ ಸದನದಲ್ಲಿ ಇರಲಿಲ್ಲ.

ಮುಲಾಯಂ ಅಚ್ಚರಿ ಹೇಳಿಕೆ: ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಹಾರೈಸುವ ಮೂಲಕ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ಯಾದವ್ ಅಚ್ಚರಿ ಮೂಡಿಸಿದರು.

* ದೇಶದಲ್ಲಿ ಹಿಂದೆಂದಿಗಿಂತ ಈಗ ಹೆಚ್ಚಿನ ಆತ್ಮವಿಶ್ವಾಸ ಗೋಚರಿಸ ತೊಡಗಿದೆ

- ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.