ADVERTISEMENT

ಡಿಕೆಶಿ ಹೇಳಿಕೆ ವಿಚಾರವಾಗಿ ಲೋಕಸಭೆಯಲ್ಲಿ ಗದ್ದಲ: 2 ಗಂಟೆವರೆಗೆ ಸದನ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2025, 7:43 IST
Last Updated 24 ಮಾರ್ಚ್ 2025, 7:43 IST
<div class="paragraphs"><p>ಲೋಕಸಭೆ</p></div>

ಲೋಕಸಭೆ

   

ನವದೆಹಲಿ: ರಾಜ್ಯದಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಕಲ್ಪಿಸುವ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ ಸಂಬಂಧ ಬಿಜೆಪಿ ಸದಸ್ಯರು ಇಂದು ಲೋಕಸಭೆಯಲ್ಲಿ ಪದೇ ಪದೇ ಗದ್ದಲ ಎಬ್ಬಿಸಿದರು.

ಬೆಳಿಗ್ಗೆ 11 ಗಂಟೆಗೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಮುಸ್ಲಿಮರಿಗೆ ಮೀಸಲಾತಿ ವಿಚಾರವಾಗಿ ಗದ್ದಲ ಎಬ್ಬಿಸಿದರು.

ADVERTISEMENT

ಈ ಮಧ್ಯೆ, ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯಗಳನ್ನು ಪ್ರಸ್ತಾಪಿಸುತ್ತಾ ಸಮಾಜವಾದಿ ಪಕ್ಷದ ಸದಸ್ಯರು ಸಹ ಸದಬದ ಬಾವಿಗೆ ಧಾವಿಸಿ ಪೋಸ್ಟರ್‌ಗಳನ್ನು ಹಿಡಿದು ಪ್ರತಿಭಟಿಸಿದರು.

ಎಸ್‌ಪಿ ಸದಸ್ಯರು ಸದನಕ್ಕೆ ಪೋಸ್ಟರ್‌ಗಳನ್ನು ತಂದಿದ್ದಕ್ಕೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದರು. ಮಧ್ಯಾಹ್ನ 12 ಗಂಟೆಯವರೆಗೆ ಕಲಾಪವನ್ನು ಮುಂದೂಡಿದರು.

ಸದನ ಮತ್ತೆ ಸಮಾವೇಶಗೊಂಡಾಗ, ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ಕಲ್ಪಿಸಲು ಸಂವಿಧಾನವನ್ನು ಬದಲಾಯಿಸುವಂತೆ ನೀಡಿದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದರು.

‘ಸದನವು ಮೌನವಾಗಿ ಹೇಗೆ ಇದನ್ನು ವೀಕ್ಷಿಸಲು ಸಾಧ್ಯ? ಈ ಬಗ್ಗೆ ಗಸ್ ಸ್ಪಷ್ಟಪಡಿಸಬೇಕು. ಆ ವ್ಯಕ್ತಿಯನ್ನು ವಜಾಗೊಳಿಸಬೇಕು. ನೀವು ಮುಸ್ಲಿಮರಿಗೆ ಮೀಸಲಾತಿ ನೀಡುವುದಾಗಿ ಹೇಳಿಕೊಂಡು ಬಾಬಾಸಾಹೇಬ್ ಅಂಬೇಡ್ಕರ್ ಅವರ ಛಾಯಾಚಿತ್ರ ಮತ್ತು ಸಂವಿಧಾನದ ಪ್ರತಿಯನ್ನು ನಿಮ್ಮ ಜೇಬಿನಲ್ಲಿ ಹೊತ್ತುಕೊಂಡು ನಾಟಕವಾಡುತ್ತೀರಿ’ಎಂದು ರಿಜಿಜು ಹೇಳಿದರು.

ಕೆಲ ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಪ್ರತಿಕ್ರಿಯೆ ನೀಡಲು ಯತ್ನಿಸಿದರು.

ಸಭಾಪತಿ ಸ್ಥಾನದಲ್ಲಿದ್ದ ಬಿಜೆಪಿ ಸದಸ್ಯೆ ಜಗದಾಂಬಿಕಾ ಪಾಲ್, ಗದ್ದಲ ನಿಯಂತ್ರಿಸಲು ಪ್ರಯತ್ನಿಸಿದರು. ನಂತರ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಿದರು.

ಲೋಕಸಭೆ ಇಂದು ಹಣಕಾಸು ಮಸೂದೆಯನ್ನು ಚರ್ಚೆಗೆ ಕೈಗೆತ್ತಿಕೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.