ADVERTISEMENT

450 ಗ್ರಾಂ.ತೂಕದ ‘ಮೋದಿ ಮಾವು’ | ಲಖನೌ ಮಾವು ಉತ್ಸವದ ವೈಶಿಷ್ಟ್ಯ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 6:10 IST
Last Updated 24 ಜೂನ್ 2019, 6:10 IST
   

ಲಖನೌ:‘ಹಣ್ಣುಗಳ ರಾಜ’ ಮಾವಿನ ವಿವಿಧ ಪ್ರಭೇದಗಳು ಲಖನೌನಲ್ಲಿ ಆಯೋಜಿಸಿರುವ ‘ಮಾವು ಉತ್ಸವ’ದಲ್ಲಿದ್ದು, ಈ ಬಾರಿ ವಿಶಿಷ್ಟವಾದ ರಾಜಕೀಯ ತಿರುವೊಂದನ್ನು ‘ಮೋದಿ ಮಾವು’ ಪಡೆದಿದೆ.

ಪ್ರದರ್ಶನದಲ್ಲಿ ಇರಿಸಿರುವ ಈ ‘ಮೋದಿ ಮಾವು’ ಎಲ್ಲರ ಗಮನ ಸೆಳೆಯುತ್ತಿದೆ.

ಪ್ರಸಿದ್ಧ ದಶಾರಿ, ಚೌಸಾ, ಹೊಸ್ನಹರಾ, ಮಲ್ಲಿಕಾ, ಟಾಮಿ ಅಟ್ಕಿನ್ಸ್, ಕೇಸರ್ ಮತ್ತು ಲಾಂಗ್ಡಾ ಸೇರಿದಂತೆ ಸುಮಾರು 700 ಬಗೆಯ ಮಾವಿನ ಹಣ್ಣಿನ ತಳಿಗಳ ಜತೆ ಸುಮಾರು 450 ಗ್ರಾಂ. ತೂಕದ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹೊಂದಿರುವ 'ಮೋದಿ ಮಾವು' ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ADVERTISEMENT

‘ಮೋದಿಜಿ ಅವರಂತೆಯೇ ‘ಮೋದಿ ಮಾವು’ ಕೂಡಾ ಅಪಾರ ಜನಪ್ರಿಯತೆ ಗಳಿಸಿದೆ. ಪ್ರಧಾನಿ ಅವರ 56 ಇಂಚಿನ ಎದೆಯಂತೆ ಈ ಮಾವಿನ ಗಾತ್ರವೂ ಬಹಳ ವಿಶೇಷವಾಗಿದೆ. ಅದಕ್ಕಾಗಿಯೇ ಇದನ್ನು ‘ಮೋದಿ ಮಾವು’ ಎಂದು ಹೆಸರಿಸಲಾಯಿತು’ ಎಂದು ಮಾವಿನ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಪೇಂದ್ರ ಕುಮಾರ್‌ ಸಿಂಗ್‌ ಅವರು ’ಮೋದಿ ಮಾವು’ ಹೆಸರು ಪಡೆದ ಬಗೆಯನ್ನು ವಿವರಿಸಿದ್ದಾರೆ.
ಈ ಮಾವಿನ ಹೆಸರನ್ನು ದಾಖಲಿಸಿ ಪೇಟೆಂಟ್‌ ನೀಡಲಾಗುವುದು ಎಂದು ಸಿಂಗ್ ಹೇಳಿದ್ದಾರೆ.

ಮಾವು ಉತ್ಸವದಲ್ಲಿ ಹತ್ತಾರು ಬಗೆಯ ಮಾವಿನ ಹಣ್ಣುಗಳು

ಪ್ರಧಾನಿ ನರೇಂದ್ರ ಮೋದಿ ಅವರು ಸಿನಿಮಾ ನಟ ಅಕ್ಷಯ್‌ ಕುಮಾರ್‌ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾವಿನಹಣ್ಣಿನ ಮೇಲಿನ ಪ್ರೀತಿಯ ಬಗ್ಗೆ ಮಾತನಾಡಿದ್ದರು. ಇದಾದ ಬಳಿಕ ಅನೇಕ ಮಾವು ಬೆಳೆಗಾರರು ಈ ಹಣ್ಣುಗಳಿಗೆ ಅವರ ಹೆಸರನ್ನಿರಿಸಿದ್ದಾರೆ(ಮೋದಿ ಮಾವು).

ಪ್ರಸ್ತುತ ಮಾವು ಉತ್ಸವವನ್ನು ರಾಜ್ಯ ಸರ್ಕಾರ ತೋಟಗಾರಿಕೆ ಮತ್ತು ಆಹಾರ ಸಂಸ್ಕರರಣೆ ಹಾಗೂ ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಆಯೋಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.