ADVERTISEMENT

ಜಮ್ಮು: ಉಗ್ರ ಸಂಘಟನೆಗೆ ಮಾಹಿತಿ ರವಾನೆ- ಮದರಸಾ ಶಿಕ್ಷಕ ಬಂಧನ

ಪಿಟಿಐ
Published 3 ಸೆಪ್ಟೆಂಬರ್ 2022, 13:48 IST
Last Updated 3 ಸೆಪ್ಟೆಂಬರ್ 2022, 13:48 IST
.
.   

ಜಮ್ಮು: ಪಾಕಿಸ್ತಾನ ಮೂಲದ ಉಗ್ರ ಸಂಘಟನೆಯೊಂದಕ್ಕೆ ಭದ್ರತಾ ವ್ಯವಸ್ಥೆ ಕುರಿತ ಸೂಕ್ಷ್ಮ ಮಾಹಿತಿಗಳನ್ನು ರವಾನಿಸುತ್ತಿದ್ದ ಆರೋಪದ ಮೇಲೆ ಮದರಸಾವೊಂದರ ಶಿಕ್ಷಕನನ್ನು ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್‌ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಬಂಧಿತ ಖಾರಿ ಅಬ್ದುಲ್‌ ವಹೀದ್‌ (25) ಮೌಲ್ವಿ ಕೂಡಾ ಹೌದು. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಮತ್ತು ಅಪರಾಧ ಪ್ರಕ್ರಿಯೆ ಸಂಹಿತೆ ಅಡಿ ಆತನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಕಾಶ್ಮೀರ್‌ ಜನ್ಝಾಬ್‌ ಫೋರ್ಸ್‌ ಎಂಬ ಉಗ್ರ ಸಂಘಟನೆಗೆ 2020ರ ಡಿಸೆಂಬರ್‌ನಿಂದ ಭದ್ರತಾ ಸ್ಥಾಪನೆ ಕುರಿತು ಮಾಹಿತಿ ನೀಡುತ್ತಿರುವುದಾಗಿ ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂಲ್‌ ಪ್ರದೇಶದವನಾದ ವಹೀದ್‌, ದಡ್‌ಪೇಟ್‌ ಗ್ರಾಮದ ಮದರಸಾದಲ್ಲಿ ಪತ್ನಿ ಮತ್ತು ಮಗುವಿನ ಜೊತೆ ವಾಸವಾಗಿದ್ದಾನೆ.

ADVERTISEMENT

ಇದೊಂದು ಮಹತ್ವದ ಕಾರ್ಯಚರಣೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದೇಶದ ಆಂತರಿಕ ವಿಚಾರಗಳನ್ನು ಗಡಿ ಆಚೆಗೆ ರವಾನಿಸುತ್ತಿರುವ ಶಂಕಿತನೊಬ್ಬನಿದ್ದಾನೆ ಎಂಬ ಮಾಹಿತಿಯನ್ನು ಸೇನೆಯ ಗುಪ್ತಚರ ವಿಭಾಗ ಕಲೆಹಾಕಿತು. ವಿವಿಧ ಭದ್ರತಾಪಡೆಗಳು ಒಟ್ಟಾಗಿ ಸೇರಿ ಕಾರ್ಯಾಚರಣೆ ನಡೆಸಿದ ವೇಳೆ ವಹೀದ್‌ ಸೆರೆಸಿಕ್ಕ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.