ADVERTISEMENT

ನಿಗೂಢ ಮೃತಪಟ್ಟ ಮಗನ ವಾಟ್ಸ್‌ಆ್ಯ‍ಪ್‌ನಿಂದ ತಂದೆಗೆ 'ಶಿರಚ್ಛೇದ' ಸಂದೇಶ: SIT ರಚನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2022, 10:21 IST
Last Updated 28 ಜುಲೈ 2022, 10:21 IST
ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ
ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ   

ಭೋಪಾಲ್‌: ಮಧ್ಯಪ್ರದೇಶದ ರೈಸೆನ್ ಜಿಲ್ಲೆಯಲ್ಲಿ ರೈಲ್ವೆ ಹಳಿಯ ಮೇಲೆ ಭಾನುವಾರ ಸಂಜೆ ಸಿಕ್ಕ 20 ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿಯ ಶವವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಪ್ರಾಥಮಿಕ ತನಿಖೆಯಲ್ಲಿ ವಿದ್ಯಾರ್ಥಿ ನಿಶಾಂತ್‌ ರಾಥೋಡ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿತ್ತು. ಆದರೆ, ಸಾವಿಗೀಡಾದ ವಿದ್ಯಾರ್ಥಿಯ ವಾಟ್ಸ್‌ಆ್ಯ‍ಪ್‌ನಿಂದ ಆತನ ತಂದೆಗೆ ಬಂದಿರುವ ಸಂದೇಶವೊಂದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

‘ಗುಸ್ತಖ್-ಎ-ನಬಿ ಕಿ ಏಕ್ ಸಜಾ, ಸರ್ ತನ್ ಸೆ ಜುದಾ’ (ಪ್ರವಾದಿಗೆ ಅಗೌರವ ತೋರಿದ್ದಕ್ಕಾಗಿ ಶಿರಚ್ಛೇದ ಶಿಕ್ಷೆ) ಎಂಬ ಸಂದೇಶವು ನಿಶಾಂತ್‌ ವಾಟ್ಸ್‌ಆ್ಯ‍ಪ್‌ನಿಂದ ಆತನ ತಂದೆಗೆ ತಲುಪಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಸರ್ಕಾರವು ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದೆ.

ADVERTISEMENT

ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ, ‘ಪ್ರಾಥಮಿಕವಾಗಿ, ಇದು ಆತ್ಮಹತ್ಯೆ ಪ್ರಕರಣವೆಂದು ತೋರುತ್ತದೆ. ಮೃತದೇಹದ ಅಂಗಗಳನ್ನು ಸಂರಕ್ಷಿಸಲಾಗಿದೆ. ಮೊಬೈಲ್ ಫೋನ್‌ಗಳನ್ನು ಪರಿಶೀಲಿಸಲಾಗುತ್ತಿದೆ. ಎಸ್‌ಐಟಿ ಎಲ್ಲವನ್ನೂ ತನಿಖೆ ನಡೆಸಲಿದೆ’ ಎಂದು ತಿಳಿಸಿದ್ದಾರೆ.

ನಿಶಾಂಕ್ ಅವರು ಕ್ರಿಪ್ಟೋಕರೆನ್ಸಿ ಸೇರಿದಂತೆ ಕೆಲವು ಹಣಕಾಸು ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದನು. ಅದರಲ್ಲಿ ನಷ್ಟ ಅನುಭವಿಸಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ವರದಿಗಳು ಪ್ರಕಟಗೊಂಡಿವೆ. ಈ ನಿಟ್ಟಿನಲ್ಲಿಯೂ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ವೇಗವಾಗಿ ಚಲಿಸುತ್ತಿದ್ದ ರೈಲಿಗೆ ಸಿಕ್ಕ ನಂತರ ವಿದ್ಯಾರ್ಥಿಯ ದೇಹವು ಸೊಂಟದ ಕೆಳಗೆ ಕತ್ತರಿಸಲ್ಪಟ್ಟಿದೆ. ಆತನ ದೇಹದಲ್ಲಿ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.