ADVERTISEMENT

ಇಂದಿನಿಂದ ಮಧ್ಯಪ್ರದೇಶ ಬಜೆಟ್ ಅಧಿವೇಶನ: ಕಮಲ್‌ನಾಥ್‌ಗೆ ‘ವಿಶ್ವಾಸ’ ಪರೀಕ್ಷೆ?

ಸರ್ಕಾರ ಬೀಳಿಸುವ ಹವಣಿಕೆಯಲ್ಲಿ ಬಿಜೆಪಿ

ಪಿಟಿಐ
Published 15 ಮಾರ್ಚ್ 2020, 17:01 IST
Last Updated 15 ಮಾರ್ಚ್ 2020, 17:01 IST
ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್
ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್   

ಭೋಪಾಲ್‌: ಬಜೆಟ್‌ ಅಧಿವೇಶನ ಆರಂಭಕ್ಕೆ ಒಂದು ದಿನ ಬಾಕಿ (ಮಾ.16) ಇರುವಾಗಲೇ, ಜೈಪುರದಲ್ಲಿ ಠಿಕಾಣಿ ಹೂಡಿದ್ದ ಆಡಳಿತಾರೂಢ ಕಾಂಗ್ರೆಸ್‌ ಶಾಸಕರು ಭೋಪಾಲ್‌ಗೆ ಭಾನುವಾರ ಬಂದಿಳಿದಿದ್ದಾರೆ.

ಸರ್ಕಾರವನ್ನು ಉಳಿಸಿಕೊಳ್ಳಲು ಹೆಣಗುತ್ತಿರುವ ಕಾಂಗ್ರೆಸ್‌, ಇನ್ನೊಂದೆಡೆ ಹೇಗಾದರೂ ಮಾಡಿ ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಹಟಕ್ಕೆ ಬಿದ್ದಿರುವ ಬಿಜೆಪಿ ತನ್ನ ಶಾಸಕರಿಗೆ ವಿಪ್‌ ಜಾರಿ ಮಾಡಿವೆ.

ಕಾಂಗ್ರೆಸ್‌ನ 22 ಶಾಸಕರು ಬಂಡಾಯದ ಬಾವುಟ ಹಾರಿಸಿ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪೈಕಿ 6 ಶಾಸಕರ ರಾಜೀನಾಮೆಯನ್ನು ಸಭಾಧ್ಯಕ್ಷರು ಸ್ವೀಕರಿಸಿದ್ದಾರೆ.ತಮ್ಮ ರಾಜೀನಾಮೆಯನ್ನೂ ಸ್ವೀಕರಿಸುವಂತೆ ಉಳಿದ 16 ಶಾಸಕರೂ ಮನವಿ ಮಾಡಿದ್ದಾರೆ.

ADVERTISEMENT

ಈ ಎಲ್ಲ ಬೆಳವಣಿಗೆ ಕಾರಣ ಮುಖ್ಯಮಂತ್ರಿ ಕಮಲ್‌ನಾಥ್‌ ಈಗ ಬಹುಮತ ಸಾಬೀತುಪಡಿಸಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ‘ನಾವು ಬಹುಮತ ಸಾಬೀತು ಪಡಿಸಲಿದ್ದೇವೆ’ ಎಂದು ಸಾರ್ವಜನಿಕ ಸಂಪರ್ಕ ಸಚಿವ ಪಿ.ಸಿ.ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಸೋಮವಾರ ಆರಂಭಗೊಳ್ಳುವ ಬಜೆಟ್‌ ಅಧಿವೇಶನದಲ್ಲಿ ತಮ್ಮ ಭಾಷಣದ ನಂತರ ವಿಶ್ವಾಸಮತ ಸಾಬೀತು ಪಡಿಸುವಂತೆ ರಾಜ್ಯಪಾಲ ಲಾಲ್‌ಜಿ ಟಂಡನ್‌ ನಿರ್ದೇಶಿಸಿದ್ದಾರೆ. ಆದರೆ, ಸದನದಲ್ಲಿ ನಡೆಯಬೇಕಾದ ಕಲಾಪಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಸಭಾಧ್ಯಕ್ಷರದ್ದೇ ಆಗಿದೆ’ ಎಂದೂ ಅವರು ಹೇಳಿದ್ದಾರೆ.‌

ವಿಧಾನಸಭೆಯಲ್ಲಿ ಬಿಜೆಪಿಯ ಮುಖ್ಯಸಚೇತಕ ನರೋತ್ತಮ ಮಿಶ್ರಾ, ‘ಕಮಲ್‌ನಾಥ್‌ ನೇತೃತ್ವದ ಸರ್ಕಾರ ಅಲ್ಪಮತಕ್ಕೆ ಕುಸಿದೆ ಎಂದು ಸ್ವತಃ ರಾಜ್ಯಪಾಲರೇ ಹೇಳಿದ್ದಾರೆ. ಮುಖ್ಯಮಂತ್ರಿಗೆ ಕಳಿಸಿರುವ ಪತ್ರದಲ್ಲಿಯೂ ಈ ಅಂಶವನ್ನು ಉಲ್ಲೇಖಿಸಿದ್ದಾರೆ’ ಎಂದು ಮಿಶ್ರಾ ಹೇಳುತ್ತಾರೆ. ಬಿಜೆಪಿ ಶಾಸಕರು ಗುರುಗ್ರಾಮದಲ್ಲಿ ಉಳಿದುಕೊಂಡಿದ್ದಾರೆ.

ಸಂಖ್ಯಾ ಬಲಾ ‘ಬಲ’

ಮಧ್ಯಪ್ರದೇಶ ವಿಧಾನಸಭೆ ಒಟ್ಟು 230 ಸದಸ್ಯ ಬಲ ಹೊಂದಿದ್ದು, ಈ ಪೈಕಿ ಎರಡು ಸ್ಥಾನಗಳು ತೆರವಾಗಿವೆ. ಹೀಗಾಗಿ ಈಗಿರುವ ಒಟ್ಟು ಸದಸ್ಯರ ಸಂಖ್ಯೆ 228. ಈ ಪೈಕಿ ಕಾಂಗ್ರೆಸ್‌ನ 22 ಸದಸ್ಯರು ಬಂಡಾಯ ಎದ್ದಿದ್ದು, ಇವರಲ್ಲಿ 6 ಶಾಸಕರ ರಾಜೀನಾಮೆಯನ್ನು ಸಭಾಧ್ಯಕ್ಷ ಸ್ವೀಕರಿಸಿದ್ದಾರೆ.

ಸದನದ ಸಂಖ್ಯಾಬಲ 222ಕ್ಕೆ ಕುಸಿದಿದೆ. ಮೊದಲು 114 ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್‌ನಲ್ಲಿ ಈಗ 92 ಸದಸ್ಯರಿದ್ದಂತಾಗಿದೆ. ಸರಳ ಬಹುಮತಕ್ಕೆ 112 ಸದಸ್ಯರ ಬೆಂಬಲ ಅಗತ್ಯ. ಬಿಜೆಪಿ 107 ಶಾಸಕರನ್ನು ಹೊಂದಿದ್ದರೆ, ಪಕ್ಷೇತರರು–4, ಬಿಎಸ್‌ಪಿ–2 ಹಾಗೂ ಎಸ್‌ಪಿ ಒಬ್ಬ ಶಾಸಕರನ್ನು ಹೊಂದಿದೆ.

ಬಂಡಾಯ ಶಾಸಕರು ರಮಣ ರೆಸಾರ್ಟ್‌ಗೆ

ದೇವನಹಳ್ಳಿ: ಕಳೆದ ನಾಲ್ಕು ದಿನಗಳಿಂದ ನಂದಿ ಬೆಟ್ಟದ ರಸ್ತೆ ಪ್ರೆಸ್ಟೀಜ್‌ ಗಾಲ್ಫ್‌ಶೇರ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಮಧ್ಯಪ್ರದೇಶ ರಾಜ್ಯದ ಶಾಸಕರು, ರಮಣ ರೆಸಾರ್ಟ್‌ಗೆ ಸ್ಥಳಾಂತರಗೊಂಡಿದ್ದಾರೆ.

ಮಧ್ಯಪ್ರದೇಶದ ಆರು ಸಚಿವರು ಸೇರಿದಂತೆ ಕಾಂಗ್ರೆಸ್‌ನ 19 ಮಂದಿ ಬಂಡಾಯ ಶಾಸಕರು ರೆಸಾರ್ಟ್‌ನಲ್ಲಿದ್ದರು. ಶನಿವಾರ ತಡರಾತ್ರಿ ಏಕಾಏಕಿ ಖಾಲಿ ಮಾಡಿಕೊಂಡು ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ರಾಜಾನುಕುಂಟೆ ಸಮೀಪದ ಸಿಂಗನಾಯಕನಹಳ್ಳಿ ಬಳಿಯ ರಮಣ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.