ADVERTISEMENT

ಮಧ್ಯಪ್ರದೇಶ: ಶೇ 98 ಅಂಕ ಪಡೆದು ದೇಶದ ಗಮನ ಸೆಳೆದ ರೋಶನಿ ಭದೊರಿಯಾ

ನಿತ್ಯವೂ ಸೈಕಲ್‌ನಲ್ಲಿ 24 ಕಿ.ಮೀ. ಕ್ರಮಿಸಿ ಶಾಲೆಗೆ ಹೋಗುತ್ತಿದ್ದ ಬಾಲಕಿ

ಪಿಟಿಐ
Published 6 ಜುಲೈ 2020, 1:44 IST
Last Updated 6 ಜುಲೈ 2020, 1:44 IST
ಬಾಲಕಿ ರೋಶನಿ ಭದೊರಿಯಾ ಸೈಕಲ್ ಮೇಲೇರಿ ಶಾಲೆಗೆ ಹೋಗುತ್ತಿರುವುದು
ಬಾಲಕಿ ರೋಶನಿ ಭದೊರಿಯಾ ಸೈಕಲ್ ಮೇಲೇರಿ ಶಾಲೆಗೆ ಹೋಗುತ್ತಿರುವುದು   

ಭಿಂಡ್‌ (ಮಧ್ಯಪ್ರದೇಶ): ಸಾಧನೆ ಮಾಡುವ ಮನಸ್ಸಿದ್ದರೆ, ಎಲ್ಲಿದ್ದರೂ, ಹೇಗಿದ್ದರೂ ಸಾಧನೆ ಮಾಡಬಹುದು ಎಂಬುದಕ್ಕೆ ಮಧ್ಯಪ್ರದೇಶದ 15 ವರ್ಷದ ಬಾಲಕಿಯೊಬ್ಬಳು ಜೀವಂತ ಸಾಕ್ಷಿಯಾಗಿದ್ದಾಳೆ.

ಎಸ್‌ಎಸ್‌ಎಲ್‌ಸಿಯಲ್ಲಿ ಕಲಿಯಲು ಪ್ರತಿದಿನ 24 ಕಿಲೋಮೀಟರ್ ಸೈಕಲ್ ತುಳಿದು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದಾಳೆ. ಮಧ್ಯಪ್ರದೇಶದ ಚಂಬಲ್‌ ವಲಯದ ಭಿಂಡ್‌ ಜಿಲ್ಲೆ, ಅಜನೋಲ್‌ ಎಂಬ ಗ್ರಾಮದ ಬಾಲಕಿಯ ಹೆಸರು ರೋಶನಿ ಭದೋರಿಯಾ.

ಬಾಲಕಿ ಸೈಕಲ್‌ನಲ್ಲಿ ಪ್ರತಿದಿನ ಮನೆಯಿಂದ ಶಾಲೆಗೆ ಶಾಲೆಯಿಂದ ಮನೆಗೆ ಹೀಗೆ 24 ಕಿ.ಮೀ. ಕ್ರಮಿಸುತ್ತಿದ್ದಳು. ರೋಶನಿ ಭದೊರಿಯಾ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 98.75ರಷ್ಟು ಅಂಕಗಳನ್ನು ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದಾಳೆ.

ADVERTISEMENT

ಈ ಬಾಲಕಿಯು ರಾಜ್ಯಮಟ್ಟದಲ್ಲಿ ಎಂಟನೇ ರ್‍ಯಾಂಕ್‌ ಪಡೆದಿದ್ದಾಳೆ. ‘ಮಗಳು ಎಂಟನೇ ತರಗತಿಯವರೆಗೆ ಬೇರೆ ಶಾಲೆಯಲ್ಲಿ ಕಲಿಯುತ್ತಿದ್ದಳು. ಅಲ್ಲಿಗೆ ವಾಹನ ಸೌಲಭ್ಯವಿತ್ತು. ಆದರೆ, 9ನೇ ತರಗತಿಯಿಂದ 12 ಕಿ.ಮೀ ದೂರದ ಸರ್ಕಾರಿ ಶಾಲೆಗೆ ಹೋಗಬೇಕಾಯಿತು. ಅಲ್ಲಿಗೆ ಹೋಗಲು ವಾಹನ ವ್ಯವಸ್ಥೆ ಇರಲಿಲ್ಲ. ಆದ್ದರಿಂದ ದಿನನಿತ್ಯ ಶಾಲೆಗೆ ಹೋಗಿಬರಲು ಒಟ್ಟು 24 ಕಿ.ಮೀ. ದೂರ ಸೈಕಲ್‌ ತುಳಿಯಬೇಕಾಗಿತ್ತು. ಎರಡು ವರ್ಷಗಳ ಕಾಲ ಆಕೆ ಸೈಕಲ್‌ನಲ್ಲೇ ಓಡಾಡಿದ್ದಾಳೆ ಎಂದು ಬಾಲಕಿಯ ತಂದೆ, ರೈತ ಪುರುಷೋತ್ತಮ ಭದೊರಿಯಾ ತಿಳಿಸಿದ್ದಾರೆ. ಮಗಳ ಸಾಧನೆಯ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದ್ದು, ಮುಂದಿನ ಶಿಕ್ಷಣಕ್ಕಾಗಿ ಬೇರೆ ಯಾವುದಾದರೂ ವಾಹನ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ.

‘ಸೈಕಲ್‌ನಲ್ಲಿ ಅಷ್ಟು ದೂರ ಹೋಗಲು ಕಷ್ಟವಾಗುತ್ತಿತ್ತು. ವರ್ಷದಲ್ಲಿ 60ರಿಂದ 70ದಿನ ಹೀಗೆ ಸೈಕಲ್‌ ಪ್ರಯಾಣ ಮಾಡುತ್ತಿದ್ದೆ. ಬಿಡುವಿದ್ದರೆ, ಅಪ್ಪ ಬೈಕ್‌ನಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದರು. ಶಾಲೆಯಿಂದ ಮನೆಗೆ ಬಂದ ಬಳಿಕ ಪ್ರತಿನಿತ್ಯ ಸುಮಾರು ಏಳು ಗಂಟೆಗಳ ಕಾಲ ಅಧ್ಯಯನ ನಡೆಸುತ್ತಿದ್ದೆ. ಮುಂದೆ ಐಎಎಸ್‌ ಮಾಡಬೇಕು ಎಂಬುದು ನನ್ನ ಗುರಿ’ ಎಂದು ರೋಶನಿ ಹೇಳಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.