ADVERTISEMENT

ಮಧ್ಯಪ್ರದೇಶ: ಶಾಸಕರು ವಿಧಾನಸಭೆಗೆ ಹೋಗಬಹುದು ಇಲ್ಲ ಬಿಡಬಹುದು: ಸುಪ್ರೀಂ

ಪಿಟಿಐ
Published 18 ಮಾರ್ಚ್ 2020, 15:27 IST
Last Updated 18 ಮಾರ್ಚ್ 2020, 15:27 IST
   

ನವದೆಹಲಿ: ಮಧ್ಯಪ್ರದೇಶ ಕಾಂಗ್ರೆಸ್‌ನ 16 ಬಂಡಾಯ ಶಾಸಕರನ್ನು ನ್ಯಾಯಾಧೀಶರ ಕೊಠಡಿಯಲ್ಲಿ ಹಾಜರುಪಡಿಸುವ ಪ್ರಸ್ತಾವವನ್ನು ಸುಪ್ರೀಂಕೋರ್ಟ್‌ ಬುಧವಾರಸಾರಾಸಗಟಾಗಿ ತಿರಸ್ಕರಿಸಿದೆ. ಅಲ್ಲದೇ, ಶಾಸಕರು ವಿಧಾನಸಭೆಗೆ ಹೋಗಬಹುದು ಅಥವಾ ಹೋಗದೇ ಇರಬಹುದು. ಆದರೆ, ಅವರನ್ನು ಕೂಡಿಹಾಕುವಂತಿಲ್ಲ ಎಂದೂ ಅಭಿಪ್ರಾಯಪಟ್ಟಿದೆ.

ಮಧ್ಯಪ್ರದೇಶದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಪರ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದ ವಕೀಲ ಮುಕುಲ್‌ ರೋಹಟಗಿ, ‘16 ಜನ ಬಂಡಾಯ ಶಾಸಕರನ್ನು ನ್ಯಾಯಾಧೀಶರ ಕೊಠಡಿಯಲ್ಲಿ ಹಾಜರುಪಡಿಸಲು ಸಿದ್ಧ’ ಎಂದು ಹೇಳಿದಾಗ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಹೇಮಂತ್‌ ಗುಪ್ತಾ ಅವರಿರುವ ಪೀಠ ಈ ಪ್ರಸ್ತಾವವನ್ನು ತಿರಸ್ಕರಿಸಿತು.

ಇನ್ನೊಂದೆಡೆ, ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರು ಗುರುವಾರ ಬಂಡಾಯ ಶಾಸಕರನ್ನು ಭೇಟಿ ಮಾಡಿ, ಅವರೊಂದಿಗಿನ ಮಾತುಕತೆಯನ್ನು ವಿಡಿಯೊ ಚಿತ್ರೀಕರಣ ಮಾಡಬಹುದು ಎಂದೂ ವಕೀಲ ರೋಹಟಗಿ ಹೇಳಿದರು. ಈ ಪ್ರಸ್ತಾವವನ್ನೂ ತಿರಸ್ಕರಿಸಿದ ನ್ಯಾಯಪೀಠ, ವಿಚಾರಣೆಯನ್ನು ಗುರುವಾರ ಬೆಳಿಗ್ಗೆ 10.30ಕ್ಕೆ ಮುಂದೂಡಿತು.

ADVERTISEMENT

ದಿಗ್ವಿಜಯ ಸಿಂಗ್ ವಿರುದ್ಧ ದೂರು

ಭೋಪಾಲ್‌: ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಪರ ಮತ ಚಲಾಯಿಸುವಂತೆ ಹಿರಿಯ ಕಾಂಗ್ರೆಸ್‌ ಮುಖಂಡ ದಿಗ್ವಿಜಯ ಸಿಂಗ್‌ ಅವರು ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ 16 ಜನ ಬಂಡಾಯ ಶಾಸಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಬಿಜೆಪಿಯ ಮಧ್ಯಪ್ರದೇಶ ಘಟಕ ಬುಧವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

‘ದೊಡ್ಡ ನಾಟಕಕಾರ‘:

ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಬಂಡಾಯ ಶಾಸಕರನ್ನು ಭೇಟಿ ಮಾಡಲು ಪ್ರಯತ್ನಿಸಿದ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್‌ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿಯ ಹಿರಿಯ ಮುಖಂಡ ಶಿವರಾಜ್‌ಸಿಂಗ್‌ ಚೌಹಾಣ್‌, ‘ಅವರು ಒಬ್ಬ ದೊಡ್ಡ ನಾಟಕಕಾರ’ ಎಂದು ಟೀಕಿಸಿದ್ದಾರೆ.

ಬಿಜೆಪಿ ಶಾಸಕರು ಠಿಕಾಣಿ ಹೂಡಿರುವ ಸಿಹೋರ್‌ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಚೌಹಾಣ್‌, ‘ಬಂಡಾಯ ಶಾಸಕರಿಗೂ ದಿಗ್ವಿಜಯ ಸಿಂಗ್‌ ಮೇಲೆ ಕೋಪ ಇದೆ. ಅವರನ್ನು ಭೇಟಿ ಮಾಡಲು ಶಾಸಕರಿಗೂ ಇಷ್ಟ ಇಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.