ADVERTISEMENT

ಬಂಗಾಳ ಕೊಲ್ಲಿಯಲ್ಲಿ 5.1 ತೀವ್ರತೆಯ ಭೂಕಂಪ:ಪಶ್ಚಿಮ ಬಂಗಾಳದ ಹಲವೆಡೆ ಕಂಪಿಸಿದ ಭೂಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2025, 1:56 IST
Last Updated 25 ಫೆಬ್ರುವರಿ 2025, 1:56 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ಇಂದು (ಮಂಗಳವಾರ) ಮುಂಜಾನೆ ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರ (ಎನ್‌ಸಿಎಸ್) ವರದಿ ಮಾಡಿದೆ.

ಇಂದು ಬೆಳಿಗ್ಗೆ 6.10ಕ್ಕೆ ಭೂಕಂಪ ಸಂಭವಿಸಿದೆ. ಬಂಗಾಳ ಕೊಲ್ಲಿಯ ನೆಲಮಟ್ಟದಿಂದ 91 ಕಿ.ಮೀ ಆಳದಲ್ಲಿ ಕಂಪನ ಕೇಂದ್ರವನ್ನು ಗುರುತಿಸಲಾಗಿದ್ದು, ಪಶ್ಚಿಮ ಬಂಗಾಳದ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಅಧ್ಯಯನ ಕೇಂದ್ರ ಮಾಹಿತಿ ನೀಡಿದೆ.

ADVERTISEMENT

ತಕ್ಷಣಕ್ಕೆ ಯಾವುದೇ ಪ್ರಾಣಹಾನಿ, ಆಸ್ತಿ ಪಾಸ್ತಿ ನಷ್ಟ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ (ಎನ್‌ಆರ್‌ಸಿ) ಈಚೆಗೆ ಭೂಕಂಪದ ಅನುಭವವಾಗಿತ್ತು. ಭೂಕಂಪದ ತೀವ್ರತೆಯು ರಿಕ್ಟರ್‌ ಮಾಪಕದಲ್ಲಿ 4ರಷ್ಟು ದಾಖಲಾಗಿದ್ದು, ಭೂಕಂಪದ ವೇಳೆ ದೊಡ್ಡ ಶಬ್ದವೊಂದು ಕೇಳಿಸಿತು’ ಎಂದು ರಾಷ್ಟ್ರೀಯ ಭೂಕಂಪ ಅಧ್ಯಯನ ಕೇಂದ್ರ ತಿಳಿಸಿತ್ತು.

ದೆಹಲಿಯಲ್ಲಿ ಮಾತ್ರವಲ್ಲದೆ ಬಿಹಾರದ ಸಿವನ್‌ ಮತ್ತು ಇದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೂ ಭೂಕಂಪ ಸಂಭವಿಸಿತ್ತು. ಇಲ್ಲಿಯೂ 4ರಷ್ಟು ತೀವ್ರತೆ ದಾಖಲಾಗಿತ್ತು. ದೆಹಲಿಯಲ್ಲಿ ನೆಲಮಟ್ಟದಿಂದ 5 ಕಿ.ಮೀ ಆಳದಲ್ಲಿ ಮತ್ತು ಬಿಹಾರದಲ್ಲಿ 10 ಕಿ.ಮೀ ಆಳದಲ್ಲಿ ಕಂಪನಕೇಂದ್ರವನ್ನು ಗುರುತಿಸಲಾಗಿತ್ತು. ಎರಡೂ ಕಡೆಗಳಲ್ಲಿಯೂ ಯಾವುದೇ ಹಾನಿ ಅಥವಾ ಸಾವು–ನೋವು ಸಂಭವಿಸಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.