ADVERTISEMENT

ಚಿಕಿತ್ಸೆಗಾಗಿ ನಾನಾವತಿ ಆಸ್ಪತ್ರೆಗೆ ವರವರ ರಾವ್‌

ರಾವ್‌ ಅವರ ಸ್ಥಳಾಂತರಕ್ಕೆ ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ

ಪಿಟಿಐ
Published 18 ನವೆಂಬರ್ 2020, 11:18 IST
Last Updated 18 ನವೆಂಬರ್ 2020, 11:18 IST
ವರವರ ರಾವ್‌
ವರವರ ರಾವ್‌   

ಮುಂಬೈ: ಎಲ್ಗರ್‌ ಪರಿಷದ್‌ ಪ್ರಕರಣ ಹಾಗೂ ಮಾವೋವಾದಿಗಳ ಜೊತೆ ನಂಟು ಹೊಂದಿದ ಪ್ರಕರಣದ ಆರೋಪಿ, ಕವಿ, ಸಾಮಾಜಿಕ ಹೋರಾಟಗಾರ ವರವರ ರಾವ್‌ ಅವರನ್ನು 15 ದಿನಗಳ ಕಾಲ ಚಿಕಿತ್ಸೆಗಾಗಿ ಜೈಲಿನಿಂದ ಮುಂಬೈನ ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸಲು ಮಹಾರಾಷ್ಟ್ರ ಸರ್ಕಾರ ಬುಧವಾರ ಒಪ್ಪಿಗೆ ನೀಡಿದೆ.

ರಾವ್‌ ಅವರನ್ನು ತಕ್ಷಣವೇ ತಲೋಜ ಜೈಲಿನಿಂದ ನಾನಾವತಿ ಆಸ್ಪತ್ರೆಗೆ ದಾಖಲಿಸಬೇಕು. ಅವರನ್ನು ಬಂಧಿಸಿಯೇ ಇಡುವುದು ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ರಾವ್‌ ಅವರ ಪತ್ನಿ ಹೇಮಲತಾ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಅನಾರೋಗ್ಯದ ಕಾರಣವನ್ನು ನೀಡಿ ಸಲ್ಲಿಕೆಯಾಗಿರುವ ಜಾಮೀನು ಅರ್ಜಿಯನ್ನೂ ಪೀಠ ವಿಚಾರಣೆ ನಡೆಸಿತು. ಆರಂಭದಲ್ಲಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಹಾಗೂ ರಾಜ್ಯ ಸರ್ಕಾರವು ವರವರ ರಾವ್‌ ಅವರ ಸ್ಥಳಾಂತರವನ್ನು ವಿರೋಧಿಸಿದ್ದವು.

‘ರಾವ್‌ ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸುವುದು ತಪ್ಪು ಸಂದೇಶವನ್ನು ರವಾನಿಸುತ್ತದೆ. ಇತರೆ ಕೈದಿಗಳೂ ಖಾಸಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಬೇಕು ಎಂದು ಕೇಳುವ ಸಾಧ್ಯತೆ ಇರುತ್ತದೆ. ಸರ್ಕಾರ ನಡೆಸುತ್ತಿರುವ ಜೆ.ಜೆ. ಆಸ್ಪತ್ರೆಯು ಚಿಕಿತ್ಸೆಗೆ ಎಲ್ಲ ಸೌಲಭ್ಯವನ್ನು ಹೊಂದಿದೆ’ ಎಂದು ಎನ್‌ಐಎ ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ಹೇಳಿದರು.

ADVERTISEMENT

ಇದನ್ನು ಒಪ್ಪದ ನ್ಯಾಯಮೂರ್ತಿಗಳಾದ ಎಸ್‌.ಎಸ್‌.ಶಿಂಧೆ ಹಾಗೂ ಮಾಧವ್‌ ಜಾಮ್ದಾರ್‌ ಅವರಿದ್ದ ಪೀಠವು, ‘ರಾವ್‌ ಅವರು ನಾನಾವತಿ ಆಸ್ಪತ್ರೆಗೆ ದಾಖಲಾದರೂ, ಎನ್‌ಐಎ ಕಸ್ಟಡಿಯಲ್ಲೇ ಇರಲಿದ್ದಾರೆ. ರಾವ್‌ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ನ್ಯಾಯಾಲಯದ ಗಮನಕ್ಕೆ ತರದೇ ಆಸ್ಪತ್ರೆಯಿಂದ ಅವರನ್ನು ಕಳುಹಿಸಬಾರದು. ರಾವ್‌ ಅವರ ಎಲ್ಲ ವೈದ್ಯಕೀಯ ವರದಿಯನ್ನು ನ್ಯಾಯಾಲಯದ ಮುಂದೆ ಸಲ್ಲಿಸಬೇಕು. ಜೊತೆಗೆ ರಾವ್‌ ಅವರ ಕುಟುಂಬದ ಸದಸ್ಯರಿಗೆ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಲು ಅವಕಾಶ ನೀಡಬೇಕು’ ಎಂದು ಆದೇಶಿಸಿ, ವಿಚಾರಣೆಯನ್ನು ಡಿ.3ಕ್ಕೆ ಮುಂದೂಡಿತು.

ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಎನ್‌ಐಎ 2018ರ ಜೂನ್‌ನಲ್ಲಿ ರಾವ್‌(ಪ್ರಸ್ತುತ ಅವರ ವಯಸ್ಸು 81) ಅವರನ್ನು ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.