ಮಹಾಕುಂಭ ನಗರ: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತದ ಘಟನೆ ಸಂಭವಿಸಿ ಒಂದು ದಿನ ಕಳೆದಿದೆ. ಈ ಘಟನೆಯು ಭಕ್ತರ ಉತ್ಸಾಹವನ್ನು ಕುಂದಿಸಿಲ್ಲ. ಆದರೆ, ಬುಧವಾರ 1 ಗಂಟೆಯಿಂದ 2 ಗಂಟೆಯವರೆಗೆ ಸಂಭವಿಸಿದ ಕಾಲ್ತುಳಿತದ ಘಟನೆಯಿಂದ ತಮ್ಮವರನ್ನು ಕಳೆದುಕೊಂಡವರ ಅಳಲು ಮಾತ್ರ ಹೇಳತೀರದು.
ತಾಯಿ, ಹೆಂಡತಿ, ತಂಗಿ, ಅತ್ತೆ, ಚಿಕ್ಕಮ್ಮ... ಹೀಗೆ ಕಾಲ್ತುಳಿತ ಘಟನೆಯ ಬಳಿಕ ಕಾಣೆಯಾದವರ ಪಟ್ಟಿಯಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೇಳದ ಸೆಕ್ಟರ್ 3ರಲ್ಲಿ ಕಾಣೆಯಾದವರ ಕುರಿತು ನೋಂದಣಿ ಮಾಡಿಸಲು ಕೇಂದ್ರವೊಂದನ್ನು ತೆರೆಯಲಾಗಿದೆ. ಈ ಕೇಂದ್ರದ ಮುಂದೆ ಉದ್ದದ ಸಾಲು ನಿರ್ಮಾಣವಾಗಿದೆ.
‘ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ. ಧ್ವನಿವರ್ಧಕಗಳ ಮೂಲಕ ನೀಡುತ್ತಿರುವ ಸೂಚನೆಗಳು ಅರ್ಥವಾಗುತ್ತಿಲ್ಲ. ಸೂಚನಾ ಫಲಕಗಳನ್ನು ಓದಲು ಬರುತ್ತಿಲ್ಲ. ಇದರಿಂದಾಗಿ ಕಾಣೆಯಾದವರಿಗೆ ಎಲ್ಲಿಗೆ ಹೇಗೆ ಹೋಗಬೇಕು ಎಂಬುದು ತಿಳಿಯುತ್ತಿಲ್ಲ’ ಎನ್ನುತ್ತಾ ಸಮಸ್ಯೆಗಳನ್ನು ತೆರದಿಟ್ಟರು ಅಸ್ಸಾಂನ ಗೀತಾ ಅಗರ್ವಾಲ್.
ಕಾಣೆಯಾದವರ ಪೈಕಿ ವೃದ್ಧರ ಸಂಖ್ಯೆಯೇ ಅಧಿಕ ವಿದೆ. ವಿವಿಧ ರಾಜ್ಯಗಳಿಂದ ತಂಡವಾಗಿ ಬಂದಿದ್ದ ವೃದ್ಧರು, ತಮ್ಮ ತಂಡದಿಂದ ಬೇರ್ಪಟ್ಟಿದ್ದಾರೆ. ಕೆಲವರು ಹೇಗೊ ಮತ್ತೊಮ್ಮೆ ತಮ್ಮ ತಂಡವನ್ನು ಸೇರಿಕೊಂಡಿ ದ್ದಾರೆ. ಆದರೆ, ಇನ್ನೂ ಹಲವರು ಕಾಣೆಯಾಗಿದ್ದಾರೆ. ಕಾಣೆಯಾದ ತಮ್ಮವರಿಗಾಗಿ ಕುಟುಂಬಸ್ಥರು ಮೇಳದ ತುಂಬೆಲ್ಲಾ ಅಲೆದಾಡುತ್ತಿದ್ದಾರೆ.
‘ನನ್ನ ಅತ್ತೆಗೆ 70 ವರ್ಷ. ಅವರ ಬಳಿ ಮೊಬೈಲ್ ಇತ್ತು. ಕೊರಳಿನಲ್ಲಿ ಗುರುತಿನ ಚೀಟಿ ಕೂಡ ಇತ್ತು. ಆದರೆ, ಕಾಲ್ತುಳಿತ ಸಂಭವಿಸಿದ ನಂತರ ಅವರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಮುಂದೇನು ಮಾಡಬೇಕು ಎಂದೇ ತಿಳಿಯುತ್ತಿಲ್ಲ’ ಎಂದು ಗದ್ಗದಿತರಾದರು ಮಧ್ಯಪ್ರದೇಶದಿಂದ ಬಂದಿದ್ದ ಜಿತೇಂದ್ರ ಸಾಹು.
‘ಪೊಲೀಸರ ಬಳಿ ಹೋದರೂ, ಕಾಣೆಯಾದವರ ನೋಂದಣಿಗಾಗಿ ತೆರೆದಿರುವ ಕೇಂದ್ರಗಳಿಗೆ ಹೋದರು ಕಾಣೆಯಾದ ನಮ್ಮವರ ಬಗ್ಗೆ ಮಾಹಿತಿ ಸಿಗುತ್ತಿಲ್ಲ’ ಎಂದರು ಬನಾರಸ್‌ನ ಜನಾರ್ದನ್ ಸಿಂಗ್. ‘ತಮ್ಮ ವೃದ್ಧ ಪೋಷಕರು, ಕುಟುಂಬಸ್ಥರನ್ನು ಕುಂಭಮೇಳಕ್ಕೆ ಕಳುಹಿಸಿ, ಊರುಗಳಲ್ಲಿರುವ ಮಕ್ಕಳ ಸಂಕಟ ನಮಗಿಂತ ಎರಡು ಪಟ್ಟು ಹೆಚ್ಚಾಗಿಯೇ ಇರುತ್ತದೆ’ ಎನ್ನುತ್ತಾರೆ ಅವರು.
ರೈಲು ನಿಲ್ದಾಣಗಳಲ್ಲಿ ವೃದ್ಧರು
ತಮ್ಮ ತಂಡದಿಂದ ಬೇರ್ಪಟ್ಟವರು, ಕುಟುಂಬದಿಂದ ಬೇರ್ಪಟ್ಟ ಕೆಲವರು ಒಂಟಿಯಾಗಿಯೇ ಮನೆ ಸೇರುವ ಯತ್ನವನ್ನೂ ನಡೆಸುತ್ತಿದ್ದಾರೆ. ಪ್ರಯಾಗರಾಜ್‌ನ ರೈಲು ನಿಲ್ದಾಣಗಳಲ್ಲಿ ಇಂಥ ದೃಶ್ಯಗಳು ಕಂಡು ಬರುತ್ತಿವೆ. ‘ನಾವು ನಮ್ಮ ತಂಡದಿಂದ ಬೇರ್ಪಟ್ಟಿದ್ದೇವೆ. ನಾವು ಈಗ ಹೇಗಾದರೂ ಮರಳಿ ಊರಿಗೆ ಹೋಗಬೇಕು. ಅದಕ್ಕಾಗಿ ರೈಲು ನಿಲ್ದಾಣಕ್ಕೆ ಬಂದು ನಿಂತಿದ್ದೇವೆ’ ಎಂದರು ರಾಮ್ ಸಹಾನಿ ಹಾಗೂ ಬಿಟ್ಟಾ ದೇವಿ ದಂಪತಿ.
‘ನನ್ನ ತಾಯಿಯ ಸಂಪರ್ಕ ಕಡಿದು ಹೋಗಿತ್ತು. ಎಲ್ಲಿ ಹೋದರು ಎಂದೇ ತಿಳಿಯಲಿಲ್ಲ. ಬಳಿಕ ನಮ್ಮ ಊರಿನ ಕೆಲವರು ಆಕೆಯನ್ನು ಹುಡುಕಿದ್ದಾರೆ. ಈಗ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದೇವೆ. ತಾಯಿ ವಾಪಸಾಗುತ್ತಿದ್ದಾರೆ’ ಎಂದರು ಒಡಿಶಾದ ಅಮರ್ ಕುಮಾರ್ ನಂದಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.