ADVERTISEMENT

ಪಾಲ್ಘರ್‌: ಶಾಲೆಯನ್ನೇ 100 ಹಾಸಿಗೆಗಳ ಕೋವಿಡ್ ಕೇಂದ್ರವಾಗಿ ಪರಿವರ್ತನೆ

ಬುಡಕಟ್ಟು ಸಮುದಾಯಗಳ ಹಕ್ಕುಗಳಿಗೆ ಹೋರಾಡುವ ಶ್ರಮಜೀವಿ ಸಂಘಟನೆಯ ಪ್ರಯತ್ನ

ಪಿಟಿಐ
Published 1 ಮೇ 2021, 6:00 IST
Last Updated 1 ಮೇ 2021, 6:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪಾಲ್ಘರ್: ಮಹಾರಾಷ್ಟ್ರದ ಪ್ರಮುಖ ಬುಡಕಟ್ಟು ಜಿಲ್ಲೆಯಾದ ಪಾಲ್ಘರ್‌ನಲ್ಲಿ ಬುಡಕಟ್ಟು ಸಮುದಾಯದವರ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆಯೊಂದು ಖಾಸಗಿ ಶಾಲೆಯೊಂದನ್ನು 100 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರವಾಗಿ ಪರಿವರ್ತಿಸಿದೆ.

ಜಿಲ್ಲೆಯ ಗಣೇಶಪುರಿ ಬಳಿಯ ಉಸ್ಗಾಂವ್‌ನಲ್ಲಿರುವ ಏಕಲವ್ಯ ಗುರುಕುಲ ಶಾಲೆಯಲ್ಲಿ ಕೋವಿಡ್‌ ಆರೈಕೆ ಕೇಂದ್ರವನ್ನು ಆರಂಭಿಸಿದೆ.

ಬುಡಕಟ್ಟು ಸಮುದಾಯದವರ ಹಕ್ಕುಗಳಿಗಾಗಿ ಹೋರಾಡುತ್ತಿರುವ ‘ಶ್ರಮಜೀವಿ ಸಂಘಟನೆ‘ಯ ಸಂಸ್ಥಾಪಕ ವಿವೇಕ್ ಪಂಡಿತ್‌, ಕೋವಿಡ್‌ ಆರೈಕೆ ಕೇಂದ್ರವನ್ನು ಆರಂಭಿಸಿದ್ದಾರೆ.

ADVERTISEMENT

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪಂಡಿತ್, ‘ಇಡೀ ವಿಶ್ವವೇ ಕೋವಿಡ್‌ ಪಿಡುಗಿನಿಂದ ನರಳುತ್ತಿರುವಾಗ, ನಾವು ಸಮಾಜಕ್ಕೆ ಏನದರೂ ಸಹಾಯ ಮಾಡಬೇಕು ಅಂತ ಎನ್ನಿಸಿತು. ಆ ಯೋಜನೆಯನ್ನು ಈ ರೀತಿ ಕಾರ್ಯರೂಪಕ್ಕೆ ತಂದಿದ್ದೇವೆ. ಈ ನೂರು ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರ ಬುಡಕಟ್ಟು ನಿವಾಸಿಗಳಿಗೆ ಸಹಾಯವಾಗುತ್ತದೆ‘ ಎಂದು ಹೇಳಿದರು.

ಈ ಕೇಂದ್ರಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಡಾ.ಮಾಣಿಕ್ ಗುರ್ಸಾಲ್, ಪಾಲ್ಘರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ದಯಾನಂದ್ ಸೂರ್ಯವಂಶಿ ಮತ್ತು ಇತರ ಅಧಿಕಾರಿಗಳು ಭೇಟಿ ನೀಡಿದರು.

‘ಕಳೆದ ಒಂದು ವಾರದಿಂದ, ಈ ಸಂಘಟನೆಯ ಸುಮಾರು 100 ಸ್ವಯಂಸೇವಕರು ಮಹಾರಾಷ್ಟ್ರದ ಠಾಣೆ, ಪಾಲ್ಘರ್, ರಾಯಗಡ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರಿಗೆ ನೆರವಾಗುತ್ತಿದ್ದಾರೆ. ಕೊರೊನಾ ಲಸಿಕೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ‘ ಎಂದು ಪಂಡಿತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.