ADVERTISEMENT

ವೈದ್ಯಕೀಯ ಕೋರ್ಸ್‌ಗೆ ಸೇರುವ ವಿಷಯಕ್ಕೆ ಜಗಳ; ತಾಯಿಯನ್ನೇ ಕೊಂದ ಮಗಳು

ಪಿಟಿಐ
Published 10 ಆಗಸ್ಟ್ 2021, 7:15 IST
Last Updated 10 ಆಗಸ್ಟ್ 2021, 7:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಥಾಣೆ: ವೈದ್ಯಕೀಯ ಕೋರ್ಸ್‌ಗೆ ಸೇರುವ ವಿಚಾರಕ್ಕೆ ಸಂಬಂಧಿಸಿದಂತೆ ಹದಿನೈದು ವರ್ಷದ ಬಾಲಕಿಯೊಬ್ಬಳು, ತನ್ನ ತಾಯಿಯೊಂದಿಗೆ ಜಗಳವಾಡಿ, ಕೊನೆಗೆ ಕರಾಟೆ ಬೆಲ್ಟ್‌ನಿಂದ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನವಿ ಮುಂಬೈ ಉಪನಗರದಲ್ಲಿ ನಡೆದಿದೆ.

ನವಿ ಮುಂಬೈ ಉಪನಗರದ ಐರೋಲಿ ಪ್ರದೇಶದಲ್ಲಿ ಜುಲೈ 30ರಂದು ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಹುಡುಗಿ ಹೇಳುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವೈದ್ಯಕೀಯ ಕೋರ್ಸ್‌ಗೆ ಸೇರುವ ವಿಚಾರದಲ್ಲಿ, ಈ ಬಾಲಕಿ ಮತ್ತು ತಾಯಿಯ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ತಾಯಿ, ತನ್ನ ಮಗಳು ವೈದ್ಯಕೀಯ ಪದವಿ ಓದಬೇಕೆಂದು ಬಯಸಿದ್ದರು. ಮಗಳಿಗೆ ಇದು ಇಷ್ಟವಿರಲಿಲ್ಲ. ಈ ಸಂಬಂಧ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎಂದು ರಬಾಲೆ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಈ ತಾಯಿ–ಮಗಳ ಘರ್ಷಣೆ ಒಮ್ಮೆ ಪೊಲೀಸ್ ಠಾಣೆ ಮೆಟ್ಟಿಲನ್ನೂ ಏರಿದೆ. ಕಳೆದ ತಿಂಗಳು ಈ ಬಾಲಕಿ, ತನ್ನ ತಾಯಿಯ ವಿರುದ್ಧ ದೂರು ದಾಖಲಿಸಿದ್ದಳು. ಪೊಲೀಸರು ಬಾಲಕಿಯ ಕುಟುಂಬದ ಸದಸ್ಯರನ್ನು ಠಾಣೆಗೆ ಕರೆಸಿ, ಮಾತುಕತೆ ನಡೆಸಿ ಕಳಿಸಿಕೊಟ್ಟಿದರು. ನಂತರ ಜುಲೈ 30ರಂದು ಇದೇ ಬಾಲಕಿ, ‘ತನ್ನ ತಾಯಿ ಮೇಲಿಂದ ಬಿದ್ದು ಸತ್ತು ಹೋಗಿದ್ದಾರೆ‘ ಎಂದು ಪೊಲೀಸರಿಗೆ ತಿಳಿಸಿದ್ದಳು.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆ ಕಳಿಸಿದರು. ಪರೀಕ್ಷೆ ವರದಿ ಪರಿಶೀಲಿಸಿದಾಗ, ಕುತ್ತಿಗೆ ಹಿಸುಕಿದ್ದರಿಂದ ಮೃತಪಟ್ಟಿದ್ದಾರೆಂದು ತಿಳಿದುಬಂದಿತು. ನಂತರ ಪೊಲೀಸರು ಬಾಲಕಿಯನ್ನು ವಿಚಾರಣೆಗೊಳಪಡಿಸಿದಾಗ, ‘ತಾಯಿ, ತನ್ನೊಂದಿಗೆ ಜಗಳವಾಡಿದಾಗ, ಕರಾಟೆ ಬೆಲ್ಟ್‌ನಿಂದ ಆಕೆಯ ಕತ್ತು ಹಿಸುಕಿದೆ‘ ಎಂದು ಒಪ್ಪಿಕೊಂಡಿದ್ದಾಳೆ.

ಬಾಲಕಿಯನ್ನು ಸೋಮವಾರ ಬಂಧಿಸಲಾಗಿದ್ದು, ಐಪಿಸಿ ಸೆಕ್ಷನ್‌ 302ರ ಪ್ರಕಾರ ಮೊಕದ್ದಮೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.