ADVERTISEMENT

ಡಿ.ಸಿ ಹುದ್ದೆಗೆ ನೇಮಕ: ಅಧಿಕಾರ ಸ್ವೀಕಾರ ಮುನ್ನವೇ ಮತ್ತೊಬ್ಬರು ಪ್ರಭಾರಿ!

ಪರ್ಭಾನಿ ಜಿಲ್ಲೆಯಲ್ಲಿ ರಾಜಕೀಯ ಮುಖಂಡರ ಕೈವಾಡ–ಆರೋಪ

ಪಿಟಿಐ
Published 2 ಆಗಸ್ಟ್ 2021, 14:14 IST
Last Updated 2 ಆಗಸ್ಟ್ 2021, 14:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಔರಂಗಾಬಾದ್: ಮಹಾರಾಷ್ಟ್ರದ ಪರ್ಭಾನಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕವಾಗಿರುವ ಮಹಿಳಾ ಐಎಎಸ್ ಅಧಿಕಾರಿ ಅಚಲ್ ಗೋಯೆಲ್ ಅವರು ಅಧಿಕಾರ ಸ್ವೀಕರಿಸುವ ಮುನ್ನವೇ ಆ ಸ್ಥಾನಕ್ಕೆ ಮತ್ತೊಬ್ಬರನ್ನು ಪ್ರಭಾರಿಯನ್ನಾಗಿ ನೇಮಿಸಿದ್ದು, ಇದರ ಹಿಂದೆ ಆಡಳಿತಾರೂಢ ರಾಜಕೀಯ ಮುಖಂಡರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ.

ಪರ್ಭಾನಿ ಕ್ಷೇತ್ರದ ಸಂಸದ ಶಿವಸೇನಾಕ್ಕೆ ಸೇರಿದವರು. ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ.

ಸ್ಥಳೀಯ ಬಿಜೆಪಿ ಶಾಸಕಿ ಮೇಘನಾ ಬೋರ್ಡಿಕರ್ ಅವರು, ‘ಕೆಲವು ಪಟ್ಟಭದ್ರ ರಾಜಕೀಯ ಹಿತಾಸಕ್ತಿಗಳ ಕಾರಣಕ್ಕಾಗಿ ಪರ್ಭಾನಿಯಲ್ಲಿ ಉತ್ತಮ ಅಧಿಕಾರಿಗಳು ಕೆಲಸ ಮಾಡಲು ಎಂದಿಗೂ ಸಾಧ್ಯವಾಗಿಲ್ಲ’ ಎಂದು ಆರೋಪಿಸಿದ್ದಾರೆ.

ADVERTISEMENT

ಯಾವುದೇ ನಾಯಕರ ಹೆಸರನ್ನು ಉಲ್ಲೇಖಿಸದೇ ಅವರು, ‘ಶಿವಸೇನಾ ಪಕ್ಷಕ್ಕೆ ಪರ್ಭಾನಿ ಜಿಲ್ಲೆಯ ಜನರು ನೀಡಿದ ಸಹಕಾರವನ್ನು ನೆನಪಿಟ್ಟುಕೊಳ್ಳಬೇಕು’ ಎಂದು ಹೇಳಿದ್ದಾರೆ.

‘ಸಾರ್ವಜನಿಕ ಹಿತದೃಷ್ಟಿಯಿಂದ ಐಎಎಸ್ ಅಧಿಕಾರಿ ಅಚಲ್ ಗೋಯಲ್ ಅವರಿಗೆ ತಕ್ಷಣವೇ ಜವಾಬ್ದಾರಿ ನೀಡಬೇಕು’ ಎಂದು ಜಾಗೃತ್ ನಾಗರಿಕ್ ಅಘಾಡಿ ಸಂಘಟನೆ ಒತ್ತಾಯ ಮಾಡಿದೆ.

‘ಜುಲೈ 31ರಂದು ಪರ್ಭಾನಿ ಜಿಲ್ಲಾಧಿಕಾರಿ ದೀಪಕ್ ಮುಗ್ಲಿಕರ್ ನಿವೃತ್ತರಾಗಿದ್ದರು. ಆ ಸ್ಥಾನಕ್ಕೆ ಐಎಎಸ್‌ ಅಧಿಕಾರಿ ಅಚಲ್ ಗೋಯಲ್ ಅವರನ್ನು ನೇಮಿಸಲಾಗಿದೆ ಎನ್ನುವ ಕುರಿತು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅಚಲ್ ಅವರು ತಮ್ಮ ಪುಟ್ಟ ಮಗುವಿನೊಂದಿಗೆ ಮುಂಚಿತವಾಗಿಯೇ ಪರ್ಭಾನಿಗೆ ಬಂದಿದ್ದರು. ಆದರೆ, ಅವರು ಅಧಿಕಾರ ಸ್ವೀಕರಿಸುವ ಮುನ್ನವೇ ದಿಢೀರನೆ ಹೆಚ್ಚುವರಿ ಜಿಲ್ಲಾಧಿಕಾರಿ ರಾಜೇಶ್ ಕಾಟ್ಕರ್ ಅವರಿಗೆ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಇದು ಕೆಲವು ರಾಜಕಾರಣಿಗಳ ಕುತಂತ್ರವಾಗಿದ್ದು, ನಾಚಿಕೆಗೇಡಿನ ಸಂಗತಿಯಾಗಿದೆ. ಮಹಿಳಾ ಸಬಲೀಕರಣದ ಕುರಿತು ರಾಜ್ಯ ಸರ್ಕಾರದ ಪೊಳ್ಳು ಕಾಳಜಿಯನ್ನು ಇದು ತೋರಿಸುತ್ತದೆ’ ಜಾಗೃತ್ ನಾಗರಿಕ್ ಅಘಾಡಿ ಅಧ್ಯಕ್ಷೆ ಮಾಧುರಿ ಕ್ಷೀರಸಾಗರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಕುರಿತು ಐಎಎಸ್ ಅಧಿಕಾರಿ ಅಚಲ್ ಗೋಯಲ್ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.