ಪ್ರಯಾಗರಾಜ್‌ನ ರೈಲು ನಿಲ್ದಾಣದಲ್ಲಿ ಗುರುವಾರ ಕಂಡುಬಂದ ದೃಶ್ಯ
–ಪಿಟಿಐ ಚಿತ್ರ
ನವದೆಹಲಿ: ‘ಮಹಾಕುಂಭ ಮೇಳದಲ್ಲಿ ಭಾಗವಹಿಸುವ ಭಕ್ತರ ಸುರಕ್ಷತೆಗಾಗಿ ನಿರ್ದಿಷ್ಟ ಮಾರ್ಗಸೂಚಿ ಹಾಗೂ ನಿಯಮಗಳನ್ನು ರೂಪಿಸಬೇಕು. ಕೇಂದ್ರ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು. ದೇಶದ ಇತರ ರಾಜ್ಯಗಳ ಸರ್ಕಾರಗಳು ಈ ಮೇಳದಲ್ಲಿ ಜನರ ಸಹಾಯಕ್ಕಾಗಿ ಕೇಂದ್ರಗಳನ್ನು ತೆರೆಯಬೇಕು’ ಎಂದು ಒತ್ತಾಯಿಸಿ ವಕೀಲ ವಿಶಾಲ್ ತಿವಾರಿ ಎಂಬುವರು ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ ಪಿಐಎಲ್ ಸಲ್ಲಿಸಿದ್ದಾರೆ.
ಸಂವಿಧಾನದ 21ನೇ ವಿಧಿ (ಸಮಾನತೆ ಹಾಗೂ ಜೀವಿಸುವುದು ಮೂಲಭೂತ ಹಕ್ಕು) ಅನ್ವಯ ತಿವಾರಿ ಅವರು ಪಿಐಎಲ್ ಸಲ್ಲಿಸಿದ್ದಾರೆ. ‘ಮೇಳದಲ್ಲಿ ಎಲ್ಲೆಡೆ ಸೂಚನಾ ಫಲಕಗಳು ಇರಬೇಕು. ದೇಶದ ವಿವಿಧ ಭಾಗಗಳಿಂದ ಬಂದ ಭಕ್ತರ ಅನುಕೂಲಕ್ಕಾಗಿ ವಿವಿಧ ಭಾಷೆಗಳಲ್ಲಿ ಸೂಚನೆಗಳು ಇರಬೇಕು’ ಎಂದೂ ಹೇಳಲಾಗಿದೆ.
‘ಉತ್ತರ ಪ್ರದೇಶ ಸರ್ಕಾರವು ಬೇರೆ ಎಲ್ಲ ರಾಜ್ಯಗಳ ಸರ್ಕಾರಗಳೊಂದಿಗೆ ಸೇರಿ ಒಟ್ಟಾಗಿ ಕೆಲಸ ಮಾಡಬೇಕು. ಬೇರೆ ರಾಜ್ಯಗಳ ವೈದ್ಯರು ನರ್ಸ್‌ಗಳನ್ನು ಮೇಳದಲ್ಲಿ ಸಹಾಯಕ್ಕೆ ಕರೆಸಿಕೊಳ್ಳಬೇಕು. ವಿಶೇಷ ಅತಿಥಿಗಳಿಗಾಗಿ ರೂಪಿಸಲಾಗಿರುವ ವಿಐಪಿ ಸಂಸ್ಕೃತಿಯನ್ನು ನಿಯಂತ್ರಿಸಬೇಕು. ಸಾಮಾನ್ಯ ಜನರ ಓಡಾಟಕ್ಕೆ ಅತಿಥಿಗಳ ಓಡಾಟ ತೊಂದರೆ ನೀಡುವಂತಿರಬಾರದು’ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.