ಮುಂಬೈ: ರಾಜ್ಯದಲ್ಲಿ ನಕ್ಸಲೀಯ ಚಟುವಟಿಕೆಗಳನ್ನು ನಿಗ್ರಹಿಸುವ ಮಸೂದೆಗೆ ಮಹಾರಾಷ್ಟ್ರ ವಿಧಾನ ಪರಿಷತ್ತು ಶುಕ್ರವಾರ ಅನುಮೋದನೆ ನೀಡಿತು.
ಮಸೂದೆ ವಿರೋಧಿಸಿ ವಿಪಕ್ಷಗಳ ಸದಸ್ಯರ ಸಭಾತ್ಯಾಗದ ನಡುವೆಯೇ, ‘ಮಹಾರಾಷ್ಟ್ರ ವಿಶೇಷ ಸಾರ್ವಜನಿಕ ಭದ್ರತಾ ಮಸೂದೆ’ಯನ್ನು ವಿಧಾನ ಪರಿಷತ್ತು ಅನುಮೋದಿಸಿತು.
ವಿಧಾನಸಭೆಯು ಈ ಮಸೂದೆಯನ್ನು ಗುರುವಾರ ಅನುಮೋದಿಸಿತ್ತು. ಗೃಹ ಖಾತೆ ರಾಜ್ಯ ಸಚಿವ ಯೋಗೇಶ್ ಕದಮ್, ಪರಿಷತ್ತಿನಲ್ಲಿ ಈ ಮಸೂದೆ ಮಂಡಿದರು.
ಮಸೂದೆ ಮಂಡಿಸಿ ಮಾತನಾಡಿದ ಸಚಿವ ಕದಮ್,‘ಸಿಪಿಐ(ಮಾವೋವಾದಿ) ರಾಜ್ಯದಲ್ಲಿ ಸಶಸ್ತ್ರ ದಂಗೆಯನ್ನು ಹಬ್ಬಿಸುತ್ತಿದೆ. ಇದನ್ನು ನಿಷೇಧಿಸಲಾಗಿದ್ದರೂ, ಇದರಡಿ ಕಾರ್ಯನಿರ್ವಹಿಸುವ ಕೆಲ ಸಂಘಟನೆಗಳು ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿವೆ’ ಎಂದರು.
‘ಯುಎಪಿಎ ಮತ್ತು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ ಇರುವಾಗ ನಕ್ಸಲೀಯ ಚಟುವಟಿಕೆಗಳ ನಿಗ್ರಹಕ್ಕೆ ಮತ್ತೊಂದು ಹೊಸ ಕಾನೂನಿನ ಅಗತ್ಯವಿದೆಯೇ’ ಎಂದು ವಿರೋಧ ಪಕ್ಷಗಳು ಪ್ರಶ್ನಿಸಿದವು. ಸಚಿವರ ಉತ್ತರದಿಂದ ತೃಪ್ತರಾಗದ ವಿರೋಧ ಪಕ್ಷಗಳ ಶಾಸಕರು ನಂತರ, ಸಭಾತ್ಯಾಗ ಮಾಡಿದರು.
ಇದು ಕಾಯ್ದೆಯಾಗಿ ಜಾರಿಗೆ ಬಂದ ನಂತರ, ಇದರಡಿ ದಾಖಲಾಗುವ ಎಲ್ಲ ಪ್ರಕರಣಗಳನ್ನು ಗಂಭೀರ ಸ್ವರೂಪದ ಹಾಗೂ ಜಾಮೀನು ರಹಿತ ಪ್ರಕರಣಗಳು ಎಂದು ಪರಿಗಣಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.