ADVERTISEMENT

ಮಹಾರಾಷ್ಟ್ರ: ಸಕ್ರಿಯವಾದ ಸಣ್ಣ ಪಕ್ಷಗಳು

ಮೈತ್ರಿಕೂಟಗಳಲ್ಲಿ ಗರಿಗೆದರಿದ ಲೆಕ್ಕಾಚಾರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 22:21 IST
Last Updated 22 ನವೆಂಬರ್ 2024, 22:21 IST
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತಎಣಿಕೆ ನಡೆಯುವ ಕೇಂದ್ರವೊಂದಲ್ಲಿ ಭದ್ರತೆಯ ಭಾಗವಾಗಿ ಕ್ಯಾಮೆರಾ ಅಳವಡಿಸಿರುವುದು –ಪಿಟಿಐ ಚಿತ್ರ
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತಎಣಿಕೆ ನಡೆಯುವ ಕೇಂದ್ರವೊಂದಲ್ಲಿ ಭದ್ರತೆಯ ಭಾಗವಾಗಿ ಕ್ಯಾಮೆರಾ ಅಳವಡಿಸಿರುವುದು –ಪಿಟಿಐ ಚಿತ್ರ   

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಮತಗಳ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಸಣ್ಣ ಪಕ್ಷಗಳು ಹೆಚ್ಚು ಸಕ್ರಿಯವಾಗಿವೆ. ದೊಡ್ಡ ಪಕ್ಷಗಳು, ಗೆಲ್ಲಬಹುದಾದ ಪ್ರಭಾವಿ ಪಕ್ಷೇತರರು ಮತ್ತು ಬಂಡಾಯ ಅಭ್ಯರ್ಥಿಗಳ ಸೆಳೆಯಲು ಕಸರತ್ತು ಆರಂಭಿಸಿವೆ.

ಶಾಸಕರಾಗಿ ಗೆದ್ದವರನ್ನು ಸೆಳೆಯುವ ಮತ್ತು ಖರೀದಿಸುವ ಯತ್ನಗಳನ್ನು ತಡೆಯುವ ಕ್ರಮವಾಗಿ ಚುನಾಯಿತ ಶಾಸಕರನ್ನು ಇರಿಸಲು ರಾಜಧಾನಿಯಲ್ಲಿನ ಪ್ರಮುಖ ರೆಸಾರ್ಟ್‌ಗಳು ಹಾಗೂ ಹೋಟೆಲ್‌ಗಳಲ್ಲಿ ಪ್ರಮುಖ ಪಕ್ಷಗಳು ಕೊಠಡಿಗಳನ್ನು ಕಾಯ್ದಿರಿಸಿವೆ.

288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಗೆ ಬುಧವಾರ (ನ.20) ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು.

ADVERTISEMENT

ಪ್ರಮುಖ ಮೈತ್ರಿಕೂಟಗಳಾದ ಬಿಜೆಪಿ ನೇತೃತ್ವದ ಮಹಾಯುತಿ ಮತ್ತು ಕಾಂಗ್ರೆಸ್ ನೇತೃತ್ವದ ಮಹಾವಿಕಾಸ ಅಘಾಡಿ (ಎಂವಿಎ) ಮೈತ್ರಿಕೂಟಗಳು, ಬಹುಜನ ವಿಕಾಸ ಅಘಾಡಿ (ಬಿವಿಎ) ಸ್ಥಾಪಕ ಹಿತೇಂದ್ರ ಠಾಕೂರ್ ಮತ್ತು ಪ್ರಹಾರ್ ಜನಶಕ್ತಿ ಪಕ್ಷದ ಬಚ್ಚುಕಡು ಅವರನ್ನು ಸಂಪರ್ಕಿಸಿವೆ. ಬಿವಿಎ 8 ಕ್ಷೇತ್ರಗಳಲ್ಲಿ, ಪ್ರಹಾರ್ ಜನಶಕ್ತಿ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.

ಕಡು ಅವರು ಕೊಲ್ಹಾಪುರ ರಾಜಮನೆತನದ ಯುವರಾಜ ಸಂಭಾಜಿ ಛತ್ರಪತಿ ಸ್ಥಾಪಿಸಿದ್ದ ಪರಿವರ್ತನ್‌ ಮಹಾಶಕ್ತಿ ಮೈತ್ರಿಕೂಟದ ಭಾಗವಾಗಿದ್ದಾರೆ. ಈ ಮೈತ್ರಿಯಲ್ಲಿ ಸಂಭಾಜಿ ಸ್ಥಾಪಿಸಿದ್ದ ಮಹಾರಾಷ್ಟ್ರ ಸ್ವರಾಜ್ಯಪಕ್ಷ ಮತ್ತು ರಾಜು ಶೆಟ್ಟಿ ಅವರ ಸ್ವಾಭಿಮಾನ ಪಕ್ಷ ಇವೆ.

ಪ್ರಸ್ತುತ ಅವಧಿಯನ್ನು ಪೂರೈಸುತ್ತಿರುವ ಹಾಲಿ ವಿಧಾನಸಭೆಯಲ್ಲಿ ಬಿವಿಎ ಪಕ್ಷದ ಮೂವರು ಮತ್ತು ಪ್ರಹಾರ್ ಜನಶಕ್ತಿ ಪಕ್ಷದ ಇಬ್ಬರು ಶಾಸಕರಿದ್ದಾರೆ.  

ಮತ್ತೊಂದು ಬೆಳವಣಿಗೆಯಲ್ಲಿ ಪ್ರಕಾಶ್‌ ಅಂಬೇಡ್ಕರ್ ಅವರ ವಂಚಿತ್ ಬಹುಜನ ಅಘಾಡಿ (ವಿಬಿಎ) ಪಕ್ಷವು, ‘ಅಗತ್ಯ ಸಂಖ್ಯೆಯ ಶಾಸಕರನ್ನು ಪಕ್ಷವು ಹೊಂದಿದಲ್ಲಿ, ರಾಜ್ಯದಲ್ಲಿ ಸರ್ಕಾರ ರಚಿಸುವ ಮೈತ್ರಿಕೂಟವನ್ನು ಬೆಂಬಲಿಸಲಾಗುವುದು’ ಎಂದು ಪ್ರಕಟಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ವಿಬಿಎ ಒಟ್ಟು 200 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.

ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸ್ಥಾಪಕ ರಾಜ್‌ ಠಾಕ್ರೆ ಅವರ ಆಪ್ತ, ಮಾಜಿ ಸಚಿವ ಬಾಳಾ ನಂದಗಾಂವಕರ್ ಅವರು ಶುಕ್ರವಾರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರನ್ನು ಭೇಟಿಯಾಗಿ ಚರ್ಚಿಸಿದರು. ರಾಜಠಾಕ್ರೆ ಈ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರನ್ನು ಬೆಂಬಲಿಸಿದ್ದರು.

ಶಾಸಕರ ಇರಿಸಲು ರೆಸಾರ್ಟ್‌, ಹೋಟೆಲ್‌ ಕಾಯ್ದಿರಿಸಿದ ಪ್ರಮುಖ ಪಕ್ಷಗಳು ಗೆಲ್ಲುವ ಸಾಧ್ಯತೆ ಇರುವವವರ ಸೆಳೆಯಲು ಪಕ್ಷಗಳ ಯತ್ನ ಬಿವಿಎ, ಪ್ರಹಾರ್ ಜನಶಕ್ತಿ ಪಕ್ಷದ ಸಂಪರ್ಕದಲ್ಲಿ ಮೈತ್ರಿಕೂಟಗಳು
ನಾವು ಆಡಳಿತದಲ್ಲಿ ಇರಲು ಬಯಸುತ್ತೇವೆ. ನಮ್ಮ  ಆಯ್ಕೆ ಅಧಿಕಾರ. ಸರ್ಕಾರವನ್ನು ರಚಿಸುವ ಮೈತ್ರಿಕೂಟವನ್ನು ಬೆಂಬಲಿಸಲಿದ್ದೇವೆ
ಪ್ರಕಾಶ್‌ ಅಂಬೇಡ್ಕರ್ ಮುಖ್ಯಸ್ಥ ಬಹುಜನ ವಂಚಿತ ಅಘಾಡಿ
ನಾವು (ಮೈತ್ರಿಕೂಟ) 160ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ. ಸರ್ಕಾರ ರಚನೆಗೆ ಯಾವುದೇ ಸಮಸ್ಯೆ ಇಲ್ಲ
ಸಂಜಯ್ ರಾವುತ್ ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ
- ಪಕ್ಷದ ಚುನಾಯಿತ ಶಾಸಕರನ್ನು ಬೆಂಗಳೂರಿಗೆ ಕರೆದೊಯ್ಯುವ ಅಗತ್ಯವಿಲ್ಲ. ರಾಜ್ಯದಲ್ಲಿ ಮಹಾವಿಕಾಸ ಅಘಾಡಿ (ಎಂವಿಎ) ಸರ್ಕಾರ ರಚಿಸಲಿದೆ
ರಮೇಶ್‌ ಚೆನ್ನಿತಾಲ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.