ADVERTISEMENT

ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆ: ಅವಿರೋಧ ಆಯ್ಕೆಯಲ್ಲಿ ಮಹಾಯುತಿ ಮೇಲುಗೈ

ಪಿಟಿಐ
Published 3 ಜನವರಿ 2026, 4:29 IST
Last Updated 3 ಜನವರಿ 2026, 4:29 IST
   

ಮುಂಬೈ: ಮಹಾರಾಷ್ಟ್ರದಲ್ಲಿ ಇದೇ 15ರಂದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ಅವಿರೋಧ ಆಯ್ಕೆಯಲ್ಲಿ ಬಿಜೆಪಿ ಮತ್ತು ಅದರ ನೇತೃತ್ವದ ಮಹಾಯುತಿ ಮೈತ್ರಿಕೂಟದ ಮಿತ್ರ ಪಕ್ಷಗಳ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ರಾಜ್ಯದಾದ್ಯಂತ ಬಿಜೆಪಿ ಮತ್ತು ಅದರ ಮಹಾಯುತಿ ಮಿತ್ರಪಕ್ಷಗಳು 68 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿವೆ. ಈ ಆಯ್ಕೆಯನ್ನು ಖಂಡಿಸಿರುವ ವಿರೋಧ ಪಕ್ಷಗಳು, ಆಡಳಿತ ಪಕ್ಷವು ಬೆದರಿಕೆ ಮತ್ತು ಹಣವನ್ನು ಬಳಸಿಕೊಂಡು ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಿದೆ ಎಂದು ಆರೋಪಿಸಿವೆ.

ರಾಜ್ಯದಾದ್ಯಂತ, ಬಿಜೆಪಿ ಮತ್ತು ಮಹಾಯುತಿಯಿಂದ 68 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಕ್ಷದ ಬೆಳೆಯುತ್ತಿರುವ ಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಬಿಜೆಪಿ ನಾಯಕ ಕೇಶವ್ ಉಪಾಧ್ಯೆ ಹೇಳಿದ್ದಾರೆ.

ADVERTISEMENT

ಈ ಪೈಕಿ ಬಿಜೆಪಿಯಿಂದ 44 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಥಾಣೆ ಜಿಲ್ಲೆಯ ಕಲ್ಯಾಣ್-ಡೊಂಬಿವ್ಲಿ ಮುನ್ಸಿಪಲ್ ಕಾರ್ಪೊರೇಷನ್, ಪುಣೆ, ಪಿಂಪ್ರಿ ಚಿಂಚ್‌ವಾಡ್, ಪನ್ವೇಲ್, ಭಿವಾಂಡಿ, ಧುಲೆ, ಜಲಗಾಂವ್ ಮತ್ತು ಅಹಲ್ಯಾನಗರದಿಂದ ಹೆಚ್ಚು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪುಣೆಯ ವಾರ್ಡ್ ಸಂಖ್ಯೆ 35ರ ಎರಡು ಕ್ಷೇತ್ರಗಳಲ್ಲಿ ಪ್ರತಿಸ್ಪರ್ಧಿಗಳು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡ ನಂತರ ಬಿಜೆಪಿ ಅಭ್ಯರ್ಥಿಗಳಾದ ಮಂಜುಷಾ ನಾಗಪುರೆ ಮತ್ತು ಶ್ರೀಕಾಂತ್ ಜಗ್ತಾಪ್ ಅವರು ಅವಿರೋಧವಾಗಿ ಆಯ್ಕೆಯಾಗುವುದರೊಂದಿಗೆ ಬಿಜೆಪಿಯ ಸಂಖ್ಯೆ 44ಕ್ಕೆ ಏರಿದೆ.

ಬಿಜೆಪಿ ಅಬ್ಯರ್ಥಿಗಳ ಗೆಲುವನ್ನು ಸ್ವಾಗತಿಸಿದ ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಮುರಳೀಧರ್ ಮೊಹೋಲ್, ಪುಣೆಯ ಮುಂದಿನ ಮೇಯರ್ ತಮ್ಮ ಪಕ್ಷದವರಾಗಿರುತ್ತಾರೆ ಎಂದು ಹೇಳಿದರು.

‘ನಮಗೆ 125 ಸ್ಥಾನಗಳನ್ನೂ ಗೆಲ್ಲುವ ಗುರಿ ಇದೆ, ಅದರಲ್ಲಿ ಈಗಾಗಲೇ ಎರಡು ಸ್ಥಾನಗಳನ್ನು ಗೆದ್ದಿದ್ದೇವೆ, ಆದ್ದರಿಂದ 123 ಸ್ಥಾನ ಉಳಿದಿವೆ. ಇದು ನಮ್ಮ ಪಕ್ಷದ ಉತ್ತಮ ಆಡಳಿತಕ್ಕೆ ಪ್ರಮಾಣಪತ್ರ‘ ಎಂದು ಮೊಹೋಲ್ ಹೇಳಿದ್ದಾರೆ.

ಏಕನಾಥ ಶಿಂದೆ ನೇತೃತ್ವದ ಶಿವಸೇನಾದ 22 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ, ಆದರೆ, ಅಜಿತ್ ಪವಾರ್ ಅವರ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳು ಮಾತ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಜನಪ್ರಿಯತೆ ಮತ್ತು ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ಚವಾಣ್ ಅವರ ಯಶಸ್ವಿ ಚುನಾವಣಾ ತಂತ್ರವೇ ಈ ಪ್ರವೃತ್ತಿಗೆ ಕಾರಣ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಈ ಕುರಿತಂತೆ, ಎಕ್ಸ್‌ ಪೋಸ್ಟ್‌ನಲ್ಲಿ ಟೀಕಿಸಿರುವ ಶಿವಸೇನಾ(ಯುಬಿಟಿ) ನಾಯಕ ಸಂಜಯ್ ರಾವುತ್, ತಡರಾತ್ರಿಯವರೆಗೆ ಅಭ್ಯರ್ಥಿಗಳಿಂದ ನಾಮಪತ್ರ ಹಿಂಪಡೆಯುವಿಕೆಯನ್ನು ಸ್ವೀಕರಿಸಲು ಚುನಾವಣಾ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ನಾಮಪತ್ರ ಹಿಂಪಡೆಯುವ ಮನವಿಯನ್ನು ಶುಕ್ರವಾರ ಮಧ್ಯಾಹ್ನ 3 ಗಂಟೆಯ ಗಡುವಿನ ಒಳಗೆ ಮಾಡಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಈ ಚುನಾವಣಾ ಪ್ರಕ್ರಿಯೆಯಲ್ಲಿರುವ ನನ್ನ ಸ್ನೇಹಿತರೊಬ್ಬರು ಹೇಳುವ ಪ್ರಕಾರ, ಮಧ್ಯಾಹ್ನ 3 ಗಂಟೆಯ ನಂತರ ನಾಮಪತ್ರ ಹಿಂಪಡೆಯುವ ಮನವಿ (ಫಾರ್ಮ್ ಸಿ) ಸ್ವೀಕರಿಸುವುದು ಸೂಕ್ತವಲ್ಲ. ಆದರೆ, ಅವರಿಗೆ ಸಚಿವರು ಮತ್ತು ಶಾಸಕರು ಹೇಳಿದಂತೆ ಕೇಳಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಇದು ಡೆಮಾಕ್ರಸಿ ಹೆಸರಲ್ಲಿ ನಡೆಯುತ್ತಿರುವ ಮೋಬೊಕ್ರಸಿ ಎಂದು ಅವರು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.