ADVERTISEMENT

ಸಿಎಂ ಪಟ್ಟ ಉಳಿಸಿಕೊಳ್ಳಲು ಪ್ರಧಾನಿ ಮೋದಿಗೆ ಕರೆ ಮಾಡಿದ ಉದ್ಧವ್ ಠಾಕ್ರೆ

ಪಿಟಿಐ
Published 1 ಮೇ 2020, 3:02 IST
Last Updated 1 ಮೇ 2020, 3:02 IST
ನರೇಂದ್ರ ಮೋದಿ ಮತ್ತು ಉದ್ಧವ್ ಠಾಕ್ರೆ
ನರೇಂದ್ರ ಮೋದಿ ಮತ್ತು ಉದ್ಧವ್ ಠಾಕ್ರೆ   

ಮುಂಬೈ: ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬೇಕಾದರೆ ಉದ್ಧವ್ ಠಾಕ್ರೆ ಅವರು ಮೇ 28ಕ್ಕೂ ಮುನ್ನ ವಿಧಾನ ಪರಿಷತ್‌ಗೆ ಆಯ್ಕೆಯಾಗಬೇಕಿದೆ. ಆದರೆ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿಚುನಾವಣೆಯನ್ನುಮುಂದೂಡಲಾಗಿದೆ. ಹೀಗಾಗಿ ರಾಜ್ಯಪಾಲರ ಕೋಟಾದಲ್ಲಿ ಠಾಕ್ರೆ ಅವರನ್ನು ನಾಮನಿರ್ದೇಶನ ಮಾಡುವ ಬಗ್ಗೆ ಮಹಾರಾಷ್ಟ್ರ ಸಚಿವಸಂಪುಟ ಏಪ್ರಿಲ್ ಆರಂಭದಲ್ಲಿ ಮೊದಲ ಶಿಫಾರಸು ಮಾಡಿತ್ತು. ಈ ವಿಚಾರದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಂದ ಸಹಕಾರ ಸಿಗದ ಹಿನ್ನೆಲೆಯಲ್ಲಿ ಠಾಕ್ರೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ ಎಂದು ಮೋದಿ ಬಳಿ ಠಾಕ್ರೆ ಹೇಳಿಕೊಂಡಿದ್ದಾರೆ.

‘ಕೊರೊನಾ ಬಿಕ್ಕಟ್ಟು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಮಹಾರಾಷ್ಟ್ರದಂತಹ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಸೃಷ್ಟಿಸುವುದು ಸರಿಯಲ್ಲ’ ಎಂದು ಮೋದಿ ಬಳಿ ಠಾಕ್ರೆ ಹೇಳಿದ್ದಾರೆ ಎನ್ನಲಾಗಿದೆ.

ADVERTISEMENT

ರಾಜ್ಯಪಾಲರ ಕೋಟಾದಲ್ಲಿ ನಾಮನಿರ್ದೇಶನ ಮಾಡುವಂತೆ ಮಹಾ ವಿಕಾಸ್ ಅಘಾಡಿ (ಶಿವಸೇನಾ, ಎನ್‌ಸಿಪಿ, ಕಾಂಗ್ರೆಸ್ ಮೈತ್ರಿ) ನಾಯಕರು ಬುಧವಾರ ಕೋಶಿಯಾರಿ ಅವರನ್ನು ಭೇಟಿಯಾಗಿ ಎರಡನೇ ಬಾರಿಗೆ ಮನವಿ ಮಾಡಿದ್ದರು. ಇದಾದ ಮರುದಿನವೇ ಠಾಕ್ರೆ ಪ್ರಧಾನಿಗೆ ಕರೆ ಮಾಡಿ ಮಾತನಾಡಿದ್ದಾರೆ.ಕಾನೂನಿನ ಪ್ರಕಾರ ಸಚಿವಸಂಪುಟ ಶಿಫಾರಸನ್ನು ಅನುಮೋದಿಸಬೇಕಾದ್ದು ರಾಜ್ಯಪಾಲರ ಕರ್ತವ್ಯ. ಆದರೆ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ಮಹಾ ವಿಕಾಸ್ ಅಘಾಡಿ ನಾಯಕರು ಆರೋಪಿಸಿದ್ದಾರೆ.

ವಿಧಾನಸಭೆ ಮತ್ತು ಪರಿಷತ್ ಎರಡರಲ್ಲೂ ಸದಸ್ಯರಲ್ಲದ ಠಾಕ್ರೆ 2019ರ ನವೆಂಬರ್ 28ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಹೀಗಾಗಿ ಮೇ 28ರ ಒಳಗೆ ಅವರು ವಿಧಾನಸಭೆ ಅಥವಾ ಪರಿಷತ್ ಈ ಎರಡರಲ್ಲಿ ಒಂದರ ಸದಸ್ಯರಾಗಿ ಆಯ್ಕೆಯಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.