ADVERTISEMENT

ಮಹಾರಾಷ್ಟ್ರ: ನವೆಂಬರ್‌ ವೇಳೆಗೆ ಸಂಪೂರ್ಣ ಅನ್‌ಲಾಕ್‌

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 14:19 IST
Last Updated 11 ಅಕ್ಟೋಬರ್ 2020, 14:19 IST
ಥಾಣೆಯಲ್ಲಿ ಚಿತ್ರಮಂದಿರದ ಕುರ್ಚಿಗಳನ್ನು ಸ್ಯಾನಿಟೈಸ್‌ ಮಾಡುತ್ತಿರುವ ನೌಕರ 
ಥಾಣೆಯಲ್ಲಿ ಚಿತ್ರಮಂದಿರದ ಕುರ್ಚಿಗಳನ್ನು ಸ್ಯಾನಿಟೈಸ್‌ ಮಾಡುತ್ತಿರುವ ನೌಕರ    

ಮುಂಬೈ: ಕೋವಿಡ್‌ ಪ್ರಕರಣಗಳು ಕಡಿಮೆ ವರದಿಯಾಗುತ್ತಿರುವುದು ಮತ್ತು ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚುತ್ತಿರುವ ಕಾರಣ ದೀಪಾವಳಿ ಅಥವಾ ನವೆಂಬರ್ ಅಂತ್ಯದ ವೇಳೆಗೆ ಅನ್‌ಲಾಕ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಲುಮಹಾರಾಷ್ಟ್ರ ಸರ್ಕಾರ ಯೋಚಿಸಿದೆ.

ಕಳೆದ 7 ತಿಂಗಳಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 15 ಲಕ್ಷ ದಾಟಿದ್ದರೆ, 40 ಸಾವಿರ ಮಂದಿ ಮೃತಪಟ್ಟಿದ್ದಾರೆ. 12.5 ಲಕ್ಷ ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.ಗರಿಷ್ಠ ಪ್ರಕರಣಗಳು ವರದಿಯಾಗಿದ್ದ ಮುಂಬೈ ಮತ್ತು ಪುಣೆ ನಗರಗಳು ಸಹಜ ಸ್ಥಿತಿಗೆ ಮರಳುತ್ತಿವೆ. ಈ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಸಂಪೂರ್ಣವಾಗಿ ಕೊನೆಗೊಳಿಸಿ ಅಗತ್ಯ ನಿಯಮಾವಳಿಗಳನ್ನು ಉಳಿಸಿಕೊಳ್ಳಲು ಸರ್ಕಾರ ಚಿಂತಿಸಿದ್ದು,ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕೆಲವೇ ದಿನಗಳಲ್ಲಿ ಸರಣಿ ಸಭೆಗಳನ್ನು ನಡೆಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

‘ನವೆಂಬರ್‌ ವೇಳೆಗೆ ಮಹಾರಾಷ್ಟ್ರ ರಾಜ್ಯದಾದ್ಯಂತ ನಿರ್ಬಂಧಗಳನ್ನು ಸಡಿಲಗೊಳಿಸಲಾಗುವುದು. ಕೋವಿಡ್‌ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು. ಶಾಲೆ, ಧಾರ್ಮಿಕ ಸ್ಥಳ ಮತ್ತು ಜಿಮ್‌ಗಳನ್ನು ಹಂತ ಹಂತವಾಗಿತೆರೆಯಲು ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಾಜೇಶ್‌ ಟೋಪೆ ತಿಳಿಸಿದ್ದಾರೆ.

ADVERTISEMENT

ಕಳೆದ ವಾರ ರೆಸ್ಟೋ ರೆಂಟ್‌, ಬಾರ್ ಮತ್ತು ಹೋಟೆಲ್‌ಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿತ್ತು. ಜನ ಸಂಚಾರ ಹೆಚ್ಚುತ್ತಿರುವ ಕಾರಣ ನಗರ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಬಾಂಬೆ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.