ADVERTISEMENT

ಗೋವಾದಲ್ಲಿ ‘ಮಹಾ’ ಲೆಕ್ಕಾಚಾರ!

ಬಿಜೆಪಿ ವಿರೋಧಿ ಮೈತ್ರಿಕೂಟ ರಚನೆಗೆ ಮುಂದಾದ ಸೇನಾ; ಗೋವಾ ಕಾಂಗ್ರೆಸ್‌ ಘಟಕ ನಿರಾಸಕ್ತಿ

ಪಿಟಿಐ
Published 29 ನವೆಂಬರ್ 2019, 19:12 IST
Last Updated 29 ನವೆಂಬರ್ 2019, 19:12 IST
ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನ ನಮಸ್ಕರಿಸಿ ಕಚೇರಿ ಪ್ರವೇಶಿಸಿದರು  – ಪಿಟಿಐ ಚಿತ್ರ
ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮುನ್ನ ನಮಸ್ಕರಿಸಿ ಕಚೇರಿ ಪ್ರವೇಶಿಸಿದರು  – ಪಿಟಿಐ ಚಿತ್ರ   

ಮುಂಬೈ : ಮಹಾರಾಷ್ಟ್ರದಲ್ಲಿ ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ಮರುದಿನವೇ ಬಿಜೆಪಿ ಆಡಳಿತವಿರುವ ಗೋವಾ ಮೇಲೆ ಶಿವಸೇನಾ ಕಣ್ಣಿಟ್ಟಿದೆ. ಅಲ್ಲಿ ಸದ್ಯದಲ್ಲೇ ದೊಡ್ಡ ಬದಲಾವಣೆ ಆಗಲಿದೆ ಎಂಬ ಸುಳಿವನ್ನು ಸೇನಾ ನೀಡಿದೆ.

ಈ ಸಂಬಂಧ ಶಿವಸೇನಾ ಮುಖಂಡ ಸಂಜಯ್ ರಾವುತ್ ಅವರು ಗೋವಾ ಫಾರ್ವರ್ಡ್ ಪಕ್ಷದ (ಜಿಎಫ್‌ಪಿ) ಮುಖಂಡ ವಿಜಯ್ ಸರ್ದೇಸಾಯಿ ಹಾಗೂ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ (ಎಂಜಿಪಿ) ಸುದಿನ್ ಧವಳಿಕರ್ ಅವರ ಜತೆ ಚರ್ಚಿಸಿದರು.ಶಿವಸೇನಾ ರೀತಿಯಲ್ಲಿಯೇ ಎಂಜಿಪಿ ಹಾಗೂ ಜಿಎಫ್‌ಪಿಗಳು ಈ ಹಿಂದೆ ಬಿಜೆಪಿಯ ಮಿತ್ರಕೂಟದಲ್ಲಿದ್ದವು.

‘ಭೂಕಂಪ ಆಗುವುದಂತೂ ಖಚಿತ. ಸರ್ದೇಸಾಯಿಗೆ ಅವರ ಶಾಸಕರ ಬೆಂಬಲವಿದೆ. ಬಿಜೆಪಿ ನೇತೃತ್ವದ ಸರ್ಕಾರವನ್ನು ಬೆಂಬಲಿಸಿರುವ ಕೆಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ’ ಎಂದು ರಾವುತ್ ಹೇಳಿದ್ದಾರೆ.

ADVERTISEMENT

ಐದು ಪಕ್ಷಗಳನ್ನು ಒಟ್ಟಿಗೆ ಸೇರಿಸುವ ಹೊಣೆಯನ್ನು ರಾವುತ್ ವಹಿಸಿಕೊಂಡರೆ ಉತ್ತಮ ಎಂದು ಅವರು ಹೇಳಿದ್ದಾರೆ.ಮಹಾರಾಷ್ಟ್ರದ
ನೂತನ ಮೈತ್ರಿಕೂಟ ಹೇಗೆ ಕೆಲಸ ಮಾಡಲಿದೆ ಎಂಬುದನ್ನು ನೋಡುವುದಾಗಿಯೂ ಅವರು ಹೇಳಿದ್ದಾರೆ.

ಐದು ಪಕ್ಷಗಳ ಮೈತ್ರಿಕೂಟ?:ಕಾಂಗ್ರೆಸ್, ಎಂಜಿಪಿ, ಜಿಎಫ್‌ಪಿ, ಶಿವಸೇನಾ ಹಾಗೂ ಎನ್‌ಸಿಪಿ ಒಳಗೊಂಡ ಐದು ಪಕ್ಷಗಳ ಮೈತ್ರಿಕೂಟವು2022ರ ಗೋವಾ ವಿಧಾನಸಭೆ ಚುನಾವಣೆಯನ್ನು ಒಟ್ಟಾಗಿ ಎದುರಿಸುವ ಸಾಧ್ಯತೆಯಿದೆ.

ಬಿಜೆಪಿಗೆ ಪಕ್ಷಾಂತರಗೊಂಡಿರುವ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸದ ಹೊರತು, ಗೋವಾದಲ್ಲಿ ಪರ್ಯಾಯ ಸರ್ಕಾರ ರಚನೆ ಸಾಧ್ಯವಾಗದು ಎಂದು ಧವಳಿಕರ್ ಹೇಳಿದ್ದಾರೆ. 12 ಶಾಸಕರ ಸೇರ್ಪಡೆ ಬಳಿಕ ಗೋವಾದಲ್ಲಿ ಬಿಜೆಪಿ ಸರ್ಕಾರಕ್ಕೆ ಬಹುಮತ ಲಭ್ಯವಾಗಿತ್ತು.

ಆದರೆ, ಮೈತ್ರಿಕೂಟ ರಚನೆಯಲ್ಲಿ ಯಾವುದೇ ಆಸಕ್ತಿ ಇಲ್ಲ ಎಂದು ಗೋವಾ ಕಾಂಗ್ರೆಸ್ ಘಟಕ ಸ್ಪಷ್ಟಪಡಿಸಿದೆ. ಪ್ರತಿಪಕ್ಷದಲ್ಲೇ ಇರುವುದಾಗಿಯೂ ಹೇಳಿದೆ.

ಮೆಟ್ರೊ ಕಾಮಗಾರಿಗೆ ಉದ್ಧವ್ ತಡೆ

ಮುಂಬೈನ ಶ್ವಾಸಕೋಶ ಎನಿಸಿರುವ ಆರೆ ಕಾಲೊನಿಯಲ್ಲಿ ಮೆಟ್ರೊ ಬೋಗಿಯ ಶೆಡ್‌ ನಿರ್ಮಾಣಕ್ಕೆ ತಡೆ ನೀಡಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಆದೇಶಿಸಿದ್ದಾರೆ.

‘ಶೆಡ್ ನಿರ್ಮಾಣ ಹಾಗೂ ಮರಗಳ ಹನನ ಕುರಿತ ವಿಚಾರವನ್ನು ಸಮಗ್ರವಾಗಿ ಪರಿಶೀಲಿಸಬೇಕಿದೆ. ರಾತ್ರಿಹೊತ್ತು ಮರಗಳನ್ನು ಕಡಿದುಹಾಕುವ ವ್ಯವಸ್ಥೆಯನ್ನು ನಾನು ಒಪ್ಪುವುದಿಲ್ಲ. ಮುಂದಿನ ಆದೇಶದವರೆಗೆ ಒಂದೇ ಒಂದು ಮರವನ್ನೂ ಕಡಿಯುವಂತಿಲ್ಲ’ ಎಂದು ಉದ್ಧವ್ ಹೇಳಿದ್ದಾರೆ.

ಮೆಟ್ರೊ ಶೆಡ್ ನಿರ್ಮಾಣಕ್ಕಾಗಿ ಎರಡೂವರೆ ಸಾವಿರ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಕಳೆದ ತಿಂಗಳು ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ಬಿಜೆಪಿ ಮೈತ್ರಿಕೂಟದ ಭಾಗವಾಗಿದ್ದ ಶಿವಸೇನಾ ಕೂಡ ವಿರೋಧಿಸಿತ್ತು.

ಇಂದು ವಿಶ್ವಾಸಮತ?

ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ ಸರ್ಕಾರವು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶನಿವಾರ ವಿಶ್ವಾಸಮತ ಯಾಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 3ರೊಳಗೆ ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲ ಬಿ.ಕೆ. ಕೋಶಿಯಾರಿ ಅವರು ಸೂಚಿಸಿದ್ದರು.ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಿದ್ದರು.

ಅಗತ್ಯ ಸಂಖ್ಯಾಬಲ ಇಲ್ಲದ ಕಾರಣ ಗೋವಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನಮ್ಮ ಮೈತ್ರಿಕೂಟದಿಂದ ಸದ್ಯಕ್ಕೆ ತೊಂದರೆಯಾಗದು
-ಸುದಿನ್ ಧವಳಿಕರ್, ಎಂಜಿಪಿ ಮುಖಂಡ

ಗೋವಾದಲ್ಲಿ ಅನೈತಿಕ ನೆಲೆಗಟ್ಟಿನಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿದೆ. ನಾವು ಅಲ್ಲಿ ಬಿಜೆಪಿ ವಿರೋಧಿ ಮೈತ್ರಿಕೂಟವನ್ನು ಸದ್ಯದಲ್ಲೇ ರಚಿಸುತ್ತೇವೆ
-ಸಂಜಯ್ ರಾವುತ್, ಶಿವಸೇನಾ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.