ನಾಂದೇಡ್(ಮಹಾರಾಷ್ಟ್ರ): ತನ್ನ ತಂದೆ ಹಾಗೂ ಸಹೋದರರಿಂದಲೇ ಕೊಲೆಯಾದ ಪ್ರಿಯಕರನ ಶವವನ್ನೇ ಯುವತಿಯೊಬ್ಬರು ಮಹಾರಾಷ್ಟ್ರದ ನಾಂದೇಡ್‌ನಲ್ಲಿ ವರಿಸಿದ್ದಾರೆ.
ಆಂಚಲ್ ಮಾಮಿಡ್ವಾರ್ (21) ಪ್ರಿಯಕರನ ಶವವನ್ನು ಮದುವೆಯಾದ ಯುವತಿ. ಸಕ್ಷಮ್ ತಾಟೆ (20) ಕೊಲೆಯಾದ ಯುವಕ.
ತನ್ನ ಪ್ರಿಯಕರನನ್ನು ಕೊಂದ ತಂದೆ, ಸಹೋದರರನ್ನು ಗಲ್ಲಿಗೇರಿಸಬೇಕು ಎಂದು ಸಕ್ಷಮ್ ತಾಟೆ ನಿವಾಸದಲ್ಲಿ ಆಂಚಲ್ ಆಗ್ರಹಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದೆ.
ನಗರದ ಓಲ್ಡ್ ಗಂಜ್ ಪ್ರದೇಶದಲ್ಲಿ ಸಕ್ಷಮ್ ತಾಟೆ ಗುರುವಾರ ಸಂಜೆ ತನ್ನ ಗೆಳೆಯರೊಂದಿಗೆ ನಿಂತಿದ್ದಾಗ ಆಂಚಲ್‌ನ ಸಹೋದರ ಹಿಮೇಶ್ ಮಾಮಿಡ್ವಾರ್ ಜಗಳ ತೆಗೆದು ಗುಂಡು ಹಾರಿಸಿದ್ದಾನೆ. ಸ್ಥಳದಲ್ಲೇ ತಾಟೆ ಮೃತಪಟ್ಟಿದ್ದು, ಹಿಮೇಶ್, ಆತನ ಸಹೋದರ ಸಾಹಿಲ್ ಹಾಗೂ ಅವರ ತಂದೆ ಗಜಾನನ ಮಾಮಿಡ್ವಾರ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಕ್ಷಮ್‌ನ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದ ಧಾರ್ಮಿಕ ವಿಧಿವಿಧಾನಗಳು ಶುಕ್ರವಾರ ಸಂಜೆ ಆತನ ಮನೆಯಲ್ಲೇ ನಡೆಯುತ್ತಿದ್ದಾಗ ಅಲ್ಲಿಗೆ ಬಂದ ಆಂಚಲ್, ‘ನನ್ನ ಪ್ರೀತಿ ಅಮರವಾದುದು. ನಾನು ಎಂದೆಂದೂ ತಾಟೆಯ ಪತ್ನಿ ಎಂದು ಹೇಳಿಕೊಂಡು, ಶವದೊಟ್ಟಿಗೆ ವಿವಾಹವಾದಳು’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
‘ಮೂರು ವರ್ಷಗಳಿಂದ ಸಕ್ಷಮ್‌ನನ್ನು ಪ್ರೀತಿಸುತ್ತಿದ್ದೆ. ಆದರೆ ನನ್ನ ತಂದೆ ಜಾತಿಯ ಕಾರಣಕ್ಕೆ ನಮ್ಮ ಪ್ರೀತಿಯನ್ನು ವಿರೋಧಿಸುತ್ತಿದ್ದರು. ಆತನ ಒಡನಾಟದಿಂದ ದೂರವಾಗದಿದ್ದರೆ ಕೊಲ್ಲುವುದಾಗಿಯೂ ಬೆದರಿಸಿದ್ದರು. ಅದರಂತೆ ನನ್ನ ಪ್ರಿಯತಮನನ್ನು ಕೊಂದಿದ್ದಾರೆ. ನನಗೆ ನ್ಯಾಯಬೇಕು. ಕೊಲೆ ಮಾಡಿದ ಅಪ್ಪ, ಸಹೋದರರನ್ನು ಗಲ್ಲಿಗೇರಿಸಬೇಕು’ ಎಂದು ಆಂಚಲ್ ಸುದ್ದಿಗಾರರಿಗೆ ತಿಳಿಸಿದರು.
‘ಇನ್ನು ಮುಂದೆ ನಾನು ಸಕ್ಷಮ್‌ನ ಮನೆಯಲ್ಲೇ ಇರುತ್ತೇನೆ’ ಎಂದೂ ಹೇಳಿದ್ದಾರೆ.
ಸಕ್ಷಮ್ ಮತ್ತು ಹಿಮೇಶ್ ಈ ಹಿಂದೆ ಗೆಳೆಯರಾಗಿದ್ದರು. ಬಂಧಿತರು ಮೂರು ದಿನ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.