ADVERTISEMENT

ಒಂದು ಮಡ್ಗ್ಯಾಲ್ ಕುರಿ ಬೆಲೆ ₹70 ಲಕ್ಷ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸ್ಥಳೀಯ ತಳಿ

ಪಿಟಿಐ
Published 13 ಡಿಸೆಂಬರ್ 2020, 6:43 IST
Last Updated 13 ಡಿಸೆಂಬರ್ 2020, 6:43 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಪುಣೆ: ಆಕರ್ಷ ನೋಟ ಮತ್ತು ಉತ್ಕೃಷ್ಣ ಗುಣಮಟ್ಟದ ಮಾಂಸಕ್ಕೆ ಹೆಸರುವಾಸಿಯಾದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಡ್ಗ್ಯಾಲ್ ತಳಿಯ ಕುರಿಯೊಂದನ್ನು ಗ್ರಾಹಕರೊಬ್ಬರು ₹70 ಲಕ್ಷಕ್ಕೆ ಖರೀದಿಗೆ ಕೇಳಿದ್ದರಂತೆ. ಆದರೆ, ಅದರ ಮಾಲೀಕರು ಆ ಕುರಿಗೆ ₹ 1.5 ಕೋಟಿ ಬೆಲೆ ನಿಗದಿಪಡಿಸಿದರಂತೆ..!

ಹೌದು, ಸಾಂಗ್ಲಿ ಜಿಲ್ಲೆಯ ಅಟ್ಪಾಡಿ ತಹಸೀಲ್‌ನ ಕುರಿಗಾಯಿ ಬಾಬು ಮೆಟ್ಕಾರಿ ಅವರು ತಾವು ಸಾಕಿದ್ದ ವಿಶಿಷ್ಟ ಸ್ಥಳೀಯ ‘ಮಡ್ಗ್ಯಾಲ್ ತಳಿ‘ಯ ಕುರಿಗೆ ಇಷ್ಟು ಬೆಲೆ ಕೊಡುತ್ತೇವೆ ಎಂದಾಗ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ, ‘ಅದು ನನ್ನ ಅದೃಷ್ಟದ ಕುರಿ‘. ಮಾರಾಟ ಮಾಡುವುದಿಲ್ಲ‘ ಎಂದಿದ್ದಾರೆ. ಕೊನೆಗೆ ಗ್ರಾಹಕ ಮತ್ತೂ ಬಲವಂತ ಮಾಡಿದಾಗ, ಕುರಿಗೆ ₹1.5 ಕೋಟಿ ಬೆಲೆ ನಿಗದಿಪಡಿಸಿದರಂತೆ.

ಸಾಂಗ್ಲಿ ಜಿಲ್ಲೆಯ ಜಾಟ್‌, ಅಟ್ಪಾಡಿ ಭಾಗದಲ್ಲಿ ಬಹಳಷ್ಟು ಮಂದಿ ಮಡ್ಗ್ಯಾಲ್ ತಳಿ ಕುರಿ ಸಾಕಣೆ ಮಾಡುತ್ತಾರೆ. ಬಾಬು ಮೆಟ್ಕಾರಿ ಅವರ ಬಳಿ ಈ ತಳಿಯ 200 ಕುರಿಗಳಿವೆ. ವಿಷಯ ಏನೆಂದರೆ, ಅವರಲ್ಲಿರುವ ಈ ಕುರಿಗಳ್ಲಿ ಸರ್ಜಾ ಹೆಸರಿನ ಈ ಕುರಿ ನೋಡುವದಕ್ಕೆ ಹೆಚ್ಚು ಆಕರ್ಷಕವಾಗಿದೆ. ಜತೆಗೆ, ಸಂತಾನೋತ್ಪತ್ತಿ ವಿಚಾರದಲ್ಲೂ ಉತ್ತಮವಾಗಿದೆ. ಹೀಗಾಗಿ, ಅದನ್ನು ಅವರು ಮಾರಾಟ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ADVERTISEMENT

ಮಡ್ಗ್ಯಾಲ್ ತಳಿಯ ವಿಶೇಷ

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಾಟ್‌ ತಹಸೀಲ್‌ನ ಮಡ್ಗ್ಯಾಲ್ ಹಳ್ಳಿಯ ಸುತ್ತಮುತ್ತ ಈ ವಿಶಿಷ್ಟ ಸ್ಥಳೀಯ ತಳಿಯ ಕುರಿಗಳು ಸಾಕಾಣಿಕೆ ಮಾಡುತ್ತಾರೆ. ಈ ತಹಸೀಲ್‌ನ ಸುತ್ತಮುತ್ತ ಬಹಳಷ್ಟು ಮಂದಿ ಈ ತಳಿ ಸಾಕಾಣೆದಾರರಿದ್ದಾರೆ. ಅದಕ್ಕಾಗಿಯೇ ಈ ತಳಿಗಳಿಗೆ ‘ಮಡ್ಗ್ಯಾಲ್‌‘ ಹೆಸರನ್ನೇ ಇಡಲಾಗಿದೆ.

ನೋಡಲು ಆಕರ್ಷವಾಗಿರುವ, ಬೇರೆ ಕುರಿಗಳಿಗೆ ಹೋಲಿಸಿದರೆ ಗಾತ್ರದಲ್ಲಿ ದಪ್ಪ ಹಾಗೂ ಎತ್ತರವಾಗಿರುವ ಈ ಕುರಿಗಳು, ಉತ್ಕೃಷ್ಟ ಮತ್ತು ಗುಣಮಟ್ಟ ಮಾಂಸಕ್ಕೆ ತುಂಬಾ ಹೆಸರುವಾಸಿಯಾಗಿವೆ. ಆದ್ದರಿಂದಲೇ ಮಾರುಕಟ್ಟೆಯಲ್ಲಿ ಇವುಗಳಿಗೆ ಹೆಚ್ಚು ಬೇಡಿಕೆ.

’ಇಷ್ಟು ಅಧಿಕ ಬೆಲೆ, ಬೇಡಿಕೆ ಇರುವ ಅಪರೂಪದ ಕುರಿ ತಳಿಯ ಸಂಖ್ಯೆ ಹೆಚ್ಚಿಸಲು ಮಹಾರಾಷ್ಟ್ರ ರಾಜ್ಯ ಪಶುಸಂಗೋಪನಾ ಇಲಾಖೆ ವ್ಯಾಪಕವಾಗಿ ಪ್ರಯತ್ನಿಸುತ್ತಿದೆ‘ ಎಂದು ಅಧಿಕಾರಿಯೊಬ್ಬರು ‘ಸುದ್ದಿ ಸಂಸ್ಥೆ‘ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.