ADVERTISEMENT

ಇಂಥವರೂ ಇದ್ದಾರೆ | ಪ್ರಾಮಾಣಿಕತೆಗೆ ಬಡತನ ಅಡ್ಡಿಯಲ್ಲ ಎಂಬುದು ಮತ್ತೊಮ್ಮೆ ಸಾಬೀತು

ಕೈಗೆ ಸಿಕ್ಕ ₹ 40,000 ವಾಪಸ್ ಕೊಟ್ಟಾಗ ಇವರ ಬಳಿ ₹ 3 ಇತ್ತು

ಪಿಟಿಐ
Published 4 ನವೆಂಬರ್ 2019, 4:10 IST
Last Updated 4 ನವೆಂಬರ್ 2019, 4:10 IST
ಧನಾಜಿ ಜಗದಾಳೆ. Image Credit– esakal.com
ಧನಾಜಿ ಜಗದಾಳೆ. Image Credit– esakal.com   

ಪುಣೆ:ಹಣ ಕಂಡರೆ ಹೆಣವೂ ಬಾಯಿಬಿಡುತ್ತೆ ಅಂತ ಗಾದೆ ಮಾತಿದೆ. ಅಂಥದ್ರಲ್ಲಿ ಜೇಬಿನಲ್ಲಿ ಪುಡಿಕಾಸಿಲ್ಲದೆ ಅಂಗಲಾಚುವ ಪರಿಸ್ಥಿತಿಯಲ್ಲಿದ್ದಾಗಲೂ ವ್ಯಕ್ತಿಯೊಬ್ಬರು ತಮ್ಮ ಕೈಗೆ ಸಿಕ್ಕ ಬೇರೊಬ್ಬರ₹ 40 ಸಾವಿರ ಹಣವನ್ನು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಅಪರೂಪದ ವಿದ್ಯಮಾನ ಮಹಾರಾಷ್ಟ್ರದಲ್ಲಿ ನಡೆದಿದೆ.

ಜೇಬಲ್ಲಿ ₹ 3 ಅಷ್ಟೇ ಇದ್ದರೂ ದೊಡ್ಡ ಮೊತ್ತದ ಹಣವನ್ನು ಮರಳಿಸಿ ಮಾದರಿಯಾದ ವ್ಯಕ್ತಿಮಹಾರಾಷ್ಟ್ರದ ಸತಾರದ 54 ವರ್ಷ ವಯಸ್ಸಿನ ಧನಾಜಿ ಜಗದಾಳೆ.

ಇವರ ಪ್ರಾಮಾಣಿಕತೆ ದೇಶ–ಭಾಷೆ ಗಡಿ ಮೀರಿದ ಮೆಚ್ಚುಗೆ ವ್ಯಕ್ತವಾಗಿದೆ. ಸಾವಿರಾರು ಮಂದಿ ಜಗದಾಳೆ ಅವರಿಗೆ ‘ಶಹಬ್ಬಾಸ್, ನಿಮಗೆ ನಮಸ್ಕಾರ. ನಿಮ್ಮಂಥವರು ಈ ದೇಶಕ್ಕೆ ಬೇಕು. ನೀವು ಎಲ್ಲರಿಗೂ ಮಾದರಿ’ಎಂದು ಹೇಳಿದ್ದಾರೆ.

ADVERTISEMENT

ಸಣ್ಣಪುಟ್ಟ ಕೆಲಸ ಮಾಡಿ ಜೀವನ ಸಾಗಿಸುವಧನಾಜಿ ಅವರು ದೀಪಾವಳಿ ಹಬ್ಬದ ವೇಳೆ ಕೆಲಸಕ್ಕೆಂದು ತೆರಳಿದ್ದವರು ಸತಾರದ ಮಾನ್‌ ತಾಲ್ಲೂಕಿನ ಪಿಂಗಾಲಿ ಗ್ರಾಮದಲ್ಲಿರುವ ಮನೆಗೆ ವಾಪಸಾಗಲೆಂದು ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದರು. ಈ ವೇಳೆ ಅವರ ಜೇಬಿನಲ್ಲಿ ಕೇವಲ ₹ 3 ಇತ್ತು. ತನ್ನೂರಿಗೆ ಮರಳಬೇಕಾದರೆ ಬಸ್ ಟಿಕೆಟ್‌ ಕೊಳ್ಳಲು ಅವರಿಗೆ ₹ 10ರ ಅಗತ್ಯವಿತ್ತು. ಉಳಿದ ₹ 7ಕ್ಕಾಗಿ ಯಾರಲ್ಲಿ ಕೇಳುವುದು ಎಂದು ಯೋಚಿಸುತ್ತಿರುವಾಗಲೇ ಆ ನೋಟಿನ ಕಟ್ಟು ಅವರ ಕಣ್ಣಿಗೆ ಬಿತ್ತು!

‘ಬಸ್‌ಗಾಗಿ ಕಾಯುತ್ತಿದ್ದಾಗ ನೋಟಿನ ಕಟ್ಟೊಂದು ಬಿದ್ದಿರುವುದು ಕಾಣಿಸಿತು. ಅದು ಯಾರದ್ದೆಂದು ಅಕ್ಕಪಕ್ಕ ಇದ್ದವರಲ್ಲಿ ವಿಚಾರಿಸಿದೆ. ಅಷ್ಟರಲ್ಲಿ ವ್ಯಕ್ತಿಯೊಬ್ಬರು ಹತಾಶೆಯಿಂದ ಏನೋ ಹುಡುಕುತ್ತಿರುವುದು ಕಾಣಿಸಿತು. ಬಳಿಕ ಆ ಹಣ ಅವರಿಗೆ ಸೇರಿದ್ದೆಂಬುದು ತಿಳಿಯಿತು. ಪತ್ನಿಯ ಶಸ್ತ್ರಚಿಕಿತ್ಸೆಗೆಂದು ಆ ಹಣ ಒಯ್ಯುತ್ತಿದ್ದುದಾಗಿಯೂ ಆ ಕಟ್ಟಿನಲ್ಲಿ ₹ 40 ಸಾವಿರ ಇದೆಯೆಂದೂ ಅವರು ತಿಳಿಸಿದರು. ನಾನದನ್ನು ಅವರಿಗೆ ನೀಡಿದೆ. ಅವರು ಸಂತೋಷದಿಂದ ₹ 1,000 ಬಹುಮಾನವಾಗಿ ನೀಡಲು ಮುಂದಾದರು. ನಾನು ಬೇಡವೆಂದೆ. ಬದಲಿಗೆ ಬಸ್‌ ಟಿಕೆಟ್‌ಗೆ ಅಗತ್ಯವಿದ್ದ ₹ 7 ಮಾತ್ರ ಪಡೆದುಕೊಂಡೆ’ ಎಂದು ನಡೆದ ವಿದ್ಯಮಾನವನ್ನು ವಿವರಿಸಿದ್ದಾರೆಧನಾಜಿ.

ಈ ಪ್ರಾಮಾಣಿಕತೆಗಾಗಿ ಧನಾಜಿ ಅವರನ್ನು ಸತಾರದ ಬಿಜೆಪಿ ಶಾಸಕ ಶಿವೇಂದ್ರಾಜೆ ಭೋಸ್ಲೆ ಮತ್ತು ಕೆಲವು ಸಂಘಟನೆಗಳು ಸನ್ಮಾನಿಸಿವೆ. ಆದರೆ, ಅವರು ನೀಡಿರುವ ನಗದು ಬಹುಮಾನವನ್ನು ಸ್ವೀಕರಿಸಲು ಧನಾಜಿ ನಿರಾಕರಿಸಿದ್ದಾರೆ.

ಸದ್ಯ ಅಮೆರಿಕದಲ್ಲಿ ನೆಲೆಸಿರುವ, ಕೋರೆಗಾಂವ್ ತೆಹ್ಸಿಲ್‌ನ ರಾಹುಲ್ ಬರ್ಗೆ ಎಂಬುವವರು ಧನಾಜಿಗೆ ₹ 5 ಲಕ್ಷ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ಅದನ್ನೂ ಧನಾಜಿ ತಿರಸ್ಕರಿಸಿದ್ದಾರೆ.

‘ಬೇರೆಯವರ ಹಣವನ್ನು ತೆಗೆದುಕೊಳ್ಳುವುದರಿಂದ ತೃಪ್ತಿ ದೊರೆಯದು. ಜನರು ಪ್ರಾಮಾಣಿಕವಾಗಿ ಬದುಕಬೇಕು ಎಂಬ ಸಂದೇಶವನ್ನು ಕಳುಹಿಸುವುದಷ್ಟೇ ನನ್ನ ಉದ್ದೇಶ’ ಎಂದು ಧನಾಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.