ನಾಸಿಕ್: ವಿಧಾನಸಭಾ ಅಧಿವೇಶನ ನಡೆಯುವಾಗ ಮೊಬೈಲ್‌ನಲ್ಲಿ ರಮ್ಮಿ ಆಡುತ್ತಿದ್ದರು ಎಂಬ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಕೃಷಿ ಸಚಿವ ಮಾಣಿಕರಾವ್ ಕೊಕಾಟೆ ಅವರು ಮಂಗಳವಾರ ರಾಜ್ಯ ಸರ್ಕಾರವನ್ನೇ ‘ಭಿಕ್ಷುಕ’ ಎನ್ನುವ ಮೂಲಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಹಿಂದೆ ರೈತರಿಗೆ ಸಂಬಂಧಿಸಿದಂತೆ ತಾನು ನೀಡಿದ್ದ ಹೇಳಿಕೆಗೆ ಸ್ಪಷ್ಟೀಕರಣ ಕೊಡುವ ವೇಳೆ ಅವರು ಹೀಗೆ ಹೇಳಿದ್ದಾರೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು, ‘ಸಚಿವರು ಹೀಗೆಲ್ಲ ಹೇಳುವುದು ಸೂಕ್ತವಲ್ಲ, ರಾಜ್ಯದ ಆರ್ಥಿಕ ವ್ಯವಸ್ಥೆಯು ಹಲವು ಸವಾಲುಗಳ ನಡುವೆಯೂ ಸುಸ್ಥಿತಿಯಲ್ಲಿದೆ’ ಎಂದು ಹೇಳಿದ್ದಾರೆ.
ಎನ್‌ಸಿಪಿ ನಾಯಕ ಕೊಕಾಟೆ ಅವರು, ಈ ವರ್ಷದ ಆರಂಭದಲ್ಲಿಯೇ ರೈತರನ್ನು ಭಿಕ್ಷುಕರಿಗೆ ಹೋಲಿಸಿ ಹೇಳಿಕೆ ನೀಡಿದ್ದರು. ‘ಈಗ ಭಿಕ್ಷುಕರು ಸಹ ₹1 ಅನ್ನು ತೆಗೆದುಕೊಳ್ಳುವುದಿಲ್ಲ, ಆದರೆ ಇಲ್ಲಿ ನಾವು ₹1ಕ್ಕೆ ಬೆಳೆವಿಮೆ ನೀಡುತ್ತಿದ್ದೇವೆ. ಆದನ್ನೂ ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ’ ಎಂದು ಕಿಡಿಕಾರಿದ್ದರು. ಇದಕ್ಕೆ ರಾಜ್ಯದಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ಈ ಹೇಳಿಕೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಮಂಗಳವಾರ ಪ್ರತಿಕ್ರಿಯಿಸಿದ ಕೊಕಾಟೆ ಅವರು, ‘ಇಲ್ಲಿ ಸರ್ಕಾರ ರೈತರಿಗೆ ₹1 ಅನ್ನು ನೀಡುತ್ತಿಲ್ಲ. ಬದಲಿಗೆ ಸರ್ಕಾರವೇ ರೈತರಿಂದ ₹1 ಅನ್ನು ತೆಗೆದುಕೊಳ್ಳುತ್ತಿದೆ. ಅಂದರೆ ಇಲ್ಲಿ ಸರ್ಕಾರವೇ ಭಿಕ್ಷುಕನಾಗಿದೆ’ ಎಂದರು.
ಎರಡು ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಆರಂಭಿಸಲಾದ ₹1ರ ಬೆಳೆ ವಿಮೆ ಯೋಜನೆಯನ್ನು ಕೆಲ ತಿಂಗಳ ಹಿಂದೆ ರದ್ದುಗೊಳಿಸಲಾಗಿದೆ. ಅದರ ಬದಲಿಗೆ ಪ್ರಧಾನ ಮಂತ್ರಿ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಸುಪ್ರಿಯಾ ಟೀಕೆ: ಕೃಷಿ ಸಚಿವ ಕೊಕಾಟೆ ಅವರ ಹೇಳಿಕೆಯನ್ನು ಕಟುವಾಗಿ ಟೀಕಿಸಿರುವ ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ, ‘ರಾಜ್ಯದ ಆಡಳಿತವನ್ನು ಭಿಕ್ಷುಕ ಎಂದು ಕರೆಯುವುದು ಸರಿಯಲ್ಲ. ಇದರಿಂದ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಮುಖ್ಯಮಂತ್ರಿಗಳ ಶ್ರಮ ಮತ್ತು ರಾಜ್ಯದ ಜನರ ಪರಿಶ್ರಮಕ್ಕೆ ಮಾಡಿದ ಅವಮಾನವಾಗಿದೆ. ಇದನ್ನು ಸಹಿಸಿಕೊಳ್ಳಲು ಆಗುವುದಿಲ್ಲ’ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.