ADVERTISEMENT

ಮಹಾರಾಷ್ಟ್ರದಲ್ಲಿ ಭಾರೀ ಮಳೆ; ಕರಾವಳಿ ಭಾಗದ 760 ಮನೆಗಳಿಗೆ ಹಾನಿ; ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 7 ಮೇ 2025, 13:18 IST
Last Updated 7 ಮೇ 2025, 13:18 IST
   

ಪಾಲ್ಗಡ್‌: ಮಹಾರಾಷ್ಟ್ರದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಕರಾವಳಿಯ ಪಾಲ್ಗಡ್‌ ಜಿಲ್ಲೆಯಲ್ಲಿ 760 ಮನೆಗಳಿಗೆ ಹಾನಿಯಾಗಿದೆ. ವಿದ್ಯುದಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ಮತ್ತು ಬಿರುಗಾಳಿಗೆ ಮೀನು ಹಿಡಿಯಲು ಬಳಸುವ 50 ದೋಣಿಗಳಿಗೂ ಹಾನಿಯಾಗಿದೆ. ಮುಂಬೈ, ಠಾಣೆ, ಪಾಲ್ಗಡ್‌ ಮತ್ತು ರಾಯಗಡ್‌ ಜಿಲ್ಲೆಗಳಲ್ಲಿ ಮಳೆ ಸುರಿದಿದೆ. 

ಭಾರೀ ಗಾಳಿಯಿಂದ ತುಂಡಾಗಿ ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿಯ ಮೇಲೆ ಆಕಸ್ಮಿಕವಾಗಿ ಕಾಲಿಟ್ಟ ಮೊರೇಶ್ವರ ಲೋಹರ್ (65) ಎಂಬುವವರು ವಿದ್ಯುದಾಘಾತದಿಂದ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ವಿಪತ್ತು ನಿರ್ವಹಣಾ ತಂಡವನ್ನು ಕಳುಹಿಸಲಾಗಿದೆ ಎಂದು ಪಾಲ್ಗಡ್‌ನ ಜಿಲ್ಲಾಧಿಕಾರಿ ಡಾ. ಇಂದು ರಾಣಿ ಜಾಖಡ್‌ ತಿಳಿಸಿದ್ದಾರೆ.

ADVERTISEMENT

‘ಸಂತ್ರಸ್ತರ ನೆರವಿಗೆ ಜಿಲ್ಲಾಡಳಿತ ಧಾವಿಸಿದೆ. ಅರ್ಹ ನಾಗರಿಕರಿಗೆ ಸೂಕ್ತ ಪರಿಹಾರ ಸಿಗಲಿದೆ. ಈ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ’ ಎಂದಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯು ಈ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.